ನವದೆಹಲಿ: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ 45 ದಿನಗಳವರೆಗೆ ನಡೆದ ಮಹಾ ಕುಂಭಮೇಳವು ತೆರೆ ಕಂಡಿದೆ. ಸುಮಾರು 66 ಕೋಟಿ ಜನ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದು, ಧಾರ್ಮಿಕ ಕಾರ್ಯಕ್ರಮವು ಹಲವು ದಾಖಲೆಗಳನ್ನು ಬರೆದಿದೆ. ಮಹಾ ಕುಂಭಮೇಳದಿಂದ ಸುಮಾರು 3.5 ಲಕ್ಷ ಕೋಟಿ ರೂಪಾಯಿ ಆದಾಯ ಸೃಷ್ಟಿಯಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಇದರ ಬೆನ್ನಲ್ಲೇ, ಮುಂದಿನ ಮಹಾ ಕುಂಭಮೇಳವು (Kumbh Mela) ಎಲ್ಲಿ ನಡೆಯುತ್ತದೆ ಎಂಬ ಪ್ರಶ್ನೆ ಮೂಡಿದೆ.
ದೇಶದ ಹಲವು ಧಾರ್ಮಿಕ ಸ್ಥಳಗಳಲ್ಲಿ ಕುಂಭಮೇಳ ನಡೆಯುತ್ತದೆ. ಅದರಂತೆ, ಮುಂದಿನ ಕುಂಭಮೇಳವು 2027ರಲ್ಲಿನಡೆಯಲಿದೆ. ಮಹಾರಾಷ್ಟ್ರದ ನಾಶಿಕ್ ನಲ್ಲಿ ಮುಂದಿನ ಕುಂಭಮೇಳವು ನಡೆಯಲಿದೆ. ನಾಶಿಕ್ ನಗರದಿಂದ 38 ಕಿಲೋಮೀಟರ್ ದೂರದಲ್ಲಿರುವ ತ್ರಯಂಬಕೇಶ್ವರದಲ್ಲಿ ಕುಂಭಮೇಳ ನಡೆಯಲಿದೆ. ದೇಶದಲ್ಲೇ ಎರಡನೇ ಬೃಹತ್ ನದಿ ಎಂದು ಖ್ಯಾತಿಯಾಗಿರುವ ಗೋದಾವರಿ ನದಿಯಲ್ಲಿ ಕೋಟ್ಯಂತರ ಜನ ಪುಣ್ಯಸ್ನಾನ ಮಾಡಲಿದ್ದಾರೆ.
ತ್ರಯಂಬಕೇಶ್ವರ ಶಿವ ದೇವಾಲಯವು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಕಾರಣ, ಇಲ್ಲಿಗೂ ಕೋಟ್ಯಂತರ ಹಿಂದೂಗಳು ಆಗಮಿಸುತ್ತಾರೆ. ಕುಂಭಮೇಳದ ಕುರಿತು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಮಾಹಿತಿ ನೀಡಿದ್ದಾರೆ. “ಅದ್ಧೂರಿಯಾಗಿ ನಾಶಿಕ್ ಕುಂಭಮೇಳವನ್ನು ಆಯೋಜಿಸಲಾಗುತ್ತದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿ ಸುಗಮವಾಗಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
ದೇಶದಲ್ಲಿ ಪ್ರಯಾಗರಾಜ್, ಹರಿದ್ವಾರ, ಉಜ್ಜಯಿನಿ ಹಾಗೂ ನಾಶಿಕ್ ನಲ್ಲಿ ಕುಂಭಮೇಳಗಳು ನಡೆಯುತ್ತವೆ. ಪ್ರತಿ ಮೂರು ವರ್ಷಕ್ಕೆ ಒಮ್ಮೆಯಾದರೂ ಕುಂಭಮೇಳವನ್ನು ಆಯೋಜಿಸಲಾಗುತ್ತದೆ. ಪ್ರತಿ ನಾಲ್ಕು ವರ್ಷಕ್ಕೆ ಒಮ್ಮೆ ನಡೆದರೆ ಅದನ್ನು ಕುಂಭಮೇಳ ಎಂದು ಕರೆಯಲಾಗುತ್ತದೆ. 6 ವರ್ಷಕ್ಕೆ ನಡೆದರೆ ಅರ್ಧ ಕುಂಭ, 12 ವರ್ಷಕ್ಕೆ ನಡೆದರೆ ಮಹಾ ಕುಂಭ ಎಂದು ಕರೆಯಲಾಗುತ್ತದೆ.