ವಾಷಿಂಗ್ಟನ್: ಸಾಮಾನ್ಯವಾಗಿ ಉಭಯ ದೇಶಗಳ ನಾಯಕರು ದ್ವಿಪಕ್ಷೀಯ ಮಾತುಕತೆಗೆ ಭೇಟಿಯಾದರೆ, ಉಭಯ ಕುಶಲೋಪರಿ, ಮಾತುಕತೆ, ಒಪ್ಪಂದಗಳು ನಡೆಯುತ್ತವೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಯುದ್ಧಪೀಡಿತ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ ಸ್ಕಿ ನಡುವಿನ ಮಾತುಕತೆಯು ವಾಗ್ವಾದದಲ್ಲಿ ಅಂತ್ಯವಾಗಿದೆ. ಅಲ್ಲದೆ, ಜೆಲೆನ್ ಸ್ಕಿ ಹಾಗೂ ಅವರ ನಿಯೋಗವನ್ನು ಮಾತುಕತೆ ಮಧ್ಯೆಯೇ ಶ್ವೇತಭವನ ತೊರೆಯುವಂತೆ ಸೂಚಿಸಲಾಗಿದ್ದು, ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ.
ಡೊನಾಲ್ಡ್ ಟ್ರಂಪ್ ಹಾಗೂ ವೊಲೊಡಿಮಿರ್ ಜೆಲೆನ್ ಸ್ಕಿ ದ್ವಿಪಕ್ಷೀಯ ಮಾತುಕತೆ ವೇಳೆ ಖನಿಜ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಬೇಕಿತ್ತು. ಆದರೆ, ಅದಾವುದೂ ನಡೆಯಲಿಲ್ಲ. ಇಬ್ಬರು ನಾಯಕರ ಮಧ್ಯೆ ನೇರ ಪ್ರಸಾರದಲ್ಲಿಯೇ ವಾಗ್ವಾದ ನಡೆಯಿತು. ಕೊನೆಗೆ ಒಪ್ಪಂದವೂ ರದ್ದಾಯಿತು. ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಯಲಿಲ್ಲ, ಮೀಡಿಯಾಗಳ ಎದುರು ಕೈ ಕುಲುಕಲಿಲ್ಲ. ಕೊನೆಗೆ ಜೆಲೆನ್ ಸ್ಕಿ ಅವರ ನಿಯೋಗವು ಅರ್ಧದಲ್ಲಿಯೇ ಶ್ವೇತಭವನವನ್ನು ತೊರೆಯಬೇಕಾಯಿತು.
ಅಷ್ಟಕ್ಕೂ ಏನಾಯ್ತು?
ಡೊನಾಲ್ಡ್ ಟ್ರಂಪ್ ಹಾಗೂ ವೊಲೊಡಿಮಿರ್ ಜೆಲೆನ್ ಸ್ಕಿ ಅವರು ಮಾತುಕತೆ ಆರಂಭಿಸಿದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಸಾಗುತ್ತಿತ್ತು. ಆದರೆ, ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಸೇರಿ ಹಲವು ವಿಷಯಗಳ ಕುರಿತು ಜೆಲೆನ್ ಸ್ಕಿ ಸ್ಪಷ್ಟ ನಿಲುವು ವ್ಯಕ್ತಪಡಿಸಿದರು. ಇದಾದ ಬಳಿಕ ಡೊನಾಲ್ಡ್ ಟ್ರಂಪ್ ಅವರು ಕುಪಿತಗೊಂಡರು. “ನೀವು ಮೂರನೇ ಮಹಾ ಯುದ್ಧಕ್ಕೆ ಮುನ್ನುಡಿ ಬರೆಯುತ್ತಿದ್ದೀರಿ” ಎಂದು ಜೆಲೆನ್ ಸ್ಕಿ ಅವರಿಗೆ ಟ್ರಂಪ್ ಜೋರಾಗಿಯೇ ಹೇಳಿದರು. ಇದು ಮತ್ತೂ ವಾಗ್ವಾದಕ್ಕೆ ಕಾರಣವಾಯಿತು.
ಟ್ರಂಪ್ ಮಾತುಗಳನ್ನು ಕೇಳಿದ ಜೆಲೆನ್ ಸ್ಕಿ ಶ್ವೇತಭವನ ತೊರೆದರು. ಇದಾದ ಬಳಿಕ ಸ್ಪಷ್ಟನೆ ನೀಡಿದ ಡೊನಾಲ್ಡ್ ಟ್ರಂಪ್, ಜೆಲೆನ್ ಸ್ಕಿ ಅವರು ಅಗೌರವದಿಂದ ನಡೆದುಕೊಂಡರು ಎಂದು ದೂರಿದರು. ಇನ್ನು, ಡೊನಾಲ್ಡ್ ಟ್ರಂಪ್ ಅವರ ವರ್ತನೆ ಬಗ್ಗೆ ಉಕ್ರೇನ್ ನಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ರಷ್ಯಾ ಹಾಗೂ ಅಮೆರಿಕ ಉತ್ತಮ ಸ್ನೇಹ ಹೊಂದಿವೆ. ಇದೇ ಕಾರಣಕ್ಕಾಗಿ ಜೆಲೆನ್ ಸ್ಕಿ ವಿರುದ್ಧ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲು ಟ್ರಂಪ್ ಅವರು ಜೆಲೆನ್ ಸ್ಕಿ ಅವರನ್ನು ಸರ್ವಾಧಿಕಾರಿ ಎಂದು ಜರಿದಿದ್ದರು.