ಬೆಂಗಳೂರು: ಬಿಎಂಟಿಸಿ ಬಸ್ ಗಳ ಮಧ್ಯೆ ಆಟೋವೊಂದು ಸಿಲುಕಿ ಅಪ್ಪಚ್ಚಿಯಾದ ಪರಿಣಾಮ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರಿನ ಬನಶಂಕರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತನಗರದ ಸೀತಾ ಸರ್ಕಲ್ ಬಳಿ ಈ ದುರ್ಘಟನೆ ನಡೆದಿದೆ. 2 ಬಿಎಂಟಿಸಿ ಬಸ್ ಗಳ ನಡುವೆ ಆಟೋ ಸಿಲುಕಿ ಅಪ್ಪಚ್ಚಿಯಾಗಿದೆ. ಹೀಗಾಗಿ ಆಟೋದಲ್ಲಿದ್ದ ಚಾಲಕ ಹಾಗೂ ಓರ್ವ ಪ್ರಯಾಣಿಕ ಸಿಲುಕಿ ಅಪ್ಪಚ್ಚಿಯಾಗಿದ್ದಾರೆ.
ಆಟೋ ಚಾಲಕ ವಿಜಯ್ ಕುಮಾರ್(50), ಪ್ರಯಾಣಿಕ ವಿಷ್ಣುಬಾಟಿಯ (70) ಸಾವನ್ನಪ್ಪಿರುವ ದುರ್ದೈವಿಗಳು. ಇಂದು ಮಧ್ಯಾಹ್ನ ಹೊಸಕೆರೆ ಹಳ್ಳಿ ಕ್ರಾಸ್ ಸೀತಾ ಸರ್ಕಲ್ ಹತ್ತಿರ ಈ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಇದರ ಹಿಂದೆ ಬರುತ್ತಿದ್ದ ಆಟೋ ಬಸ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಆಟೋದ ಹಿಂದೆ ಕೂಡ ಬಸ್ ಇದ್ದು ಅದು ಆಟೋಗೆ ಡಿಕ್ಕಿ ಹೊಡೆದಿದೆ. ಇದರಿಂದ ಎರಡು ಬಸ್ ಗಳ ಮಧ್ಯೆ ಆಟೋ ಸಿಲುಕಿ ಅಪ್ಪಚ್ಚಿಯಾಗಿ ಚಾಲಕ ಹಾಗೂ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪುವಂತಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಎಂಟಿಸಿ ಬಸ್ ಜಪ್ತಿ ಮಾಡಿ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.