ನವ ದೆಹಲಿ: ಭಾರತದ ಮಾಜಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಸವಿತಿ ಬೂರಾ ಅವರು ತಮ್ಮ ಪತಿ, ಮಾಜಿ ಭಾರತೀಯ ಕಬಡ್ಡಿ ಆಟಗಾರ ಹಾಗೂ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ದೀಪಕ್ ಹೂಡಾ ಮತ್ತು ಅವರ ಕುಟುಂಬದ ವಿರುದ್ಧ ದೌರ್ಜನ್ಯ ಹಾಗೂ ವರದಕ್ಷಿಣೆ ಪೀಡನೆ ಪ್ರಕರಣ ದಾಖಲಿಸಿದ್ದಾರೆ.
ಹರಿಯಾಣದ ಹಿಸಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೀಪಕ್ ಹೂಡಾ ಮತ್ತು ಅವರ ಕುಟುಂಬ ಹೆಚ್ಚುವರಿ ವರದಕ್ಷಿಣೆ ಹಾಗೂ ದುಬಾರಿ ಫಾರ್ಚ್ಯೂನರ್ ಕಾರು ಬೇಡಿಕೆ ಇಟ್ಟಿದ್ದಕ್ಕಾಗಿ ದೂರು ದಾಖಲಾಗಿದೆ. ಸವೀತಿ ನೀಡಿದ ದೂರಿನ ಪ್ರಕಾರ, ಪತಿ ದೈಹಿಕವಾಗಿ ಹಲ್ಲೆ ನಡೆಸಿದ್ದು, 1 ಕೋಟಿ ರೂ. ಹಣ ಮತ್ತು ಎಸ್ಯುವಿ ಕಾರು ಪತಿ ಹಾಗೂ ಅವರ ಕುಟುಂಬದಿಂದ ವರದಕ್ಷಿಣೆಯಾಗಿ ಒತ್ತಾಯಿಸಲಾಗುತ್ತಿದೆ.
ಪೊಲೀಸರು ಹೂಡಾಗೆ ವಿಚಾರಣೆಗೆ ಹಾಜರಾಗುವಂತೆ 2-3 ಬಾರಿ ನೋಟಿಸ್ ಕಳುಹಿಸಿರುವುದಾಗಿ ತಿಳಿದು ಬಂದಿದೆ. ಆದರೆ ಇಲ್ಲಿಯವರೆಗೆ ಅವರು ಹಾಜರಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ದೂರು ದಾಖಲಾದ ನಂತರ ಹೂಡಾ ತಮ್ಮ ಪ್ರತಿಕ್ರಿಯೆ ನೀಡಿದ್ದು, ಈ ಘಟನೆ ತಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿದೆಯೆಂದು ಹೇಳಿದ್ದಾರೆ. ಅವರು ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿದ್ದು, ವಿಚಾರಣೆಗೆ ಹೊಸ ದಿನಾಂಕವನ್ನು ಕೋರಿದ್ದಾರೆ.
ಹೂಡಾ ತಮ್ಮ ಪ್ರತಿಕ್ರಿಯೆಯಲ್ಲಿ ಪೊಲೀಸ್ ಠಾಣೆಗೆ ಖಂಡಿತವಾಗಿಯೂ ಹಾಜರಾಗುವುದಾಗಿ ತಿಳಿಸಿದ್ದಾರೆ. ಆದರೆ ಅವರು ಪತ್ನಿಯ ವಿರುದ್ಧ ಯಾವುದೇ ನೆಗೆಟಿವ್ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಅವರ ಮಾತಿನ ಪ್ರಕಾರ, ತನಿಖೆ ನಡೆಯುತ್ತಿದ್ದರೂ ಅವರು ಸವೀತಿಯನ್ನು ಭೇಟಿಯಾಗಲು ಅವಕಾಶ ಸಿಕ್ಕಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ.