ನವದೆಹಲಿ: ಕಲುಷಿತಗೊಂಡಿರುವ ಯಮುನಾ ನದಿಯ ಸ್ವಚ್ಛತೆಗೆ ಶಪಥ ಮಾಡಿರುವ ಬಿಜೆಪಿ, ಈಗ ಆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ. ಯಮುನೆಯನ್ನು ಸಮರೋಪಾದಿಯಲ್ಲಿ ಸ್ವಚ್ಛಗೊಳಿಸುವುದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು ‘ಯಮುನಾ ಮಾಸ್ಟರ್ ಪ್ಲಾನ್’ ಅನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಅನುಮೋದನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಯಮುನಾ ನದಿಯನ್ನು ಸ್ವಚ್ಛಗೊಳಿಸುವುದು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಆಶ್ವಾಸನೆಯಾಗಿತ್ತು. ಪ್ರಚಾರದ ಸಮಯದಲ್ಲಿ ಇದನ್ನೇ ಆಪ್ ವಿರುದ್ಧ ಬಿಜೆಪಿ ಪ್ರಬಲ ಅಸ್ತ್ರವಾಗಿ ಬಳಸಿತ್ತು. ಕಳೆದ ವಾರ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರ ಆದೇಶದಂತೆ, ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು.
ಮೂಲಗಳ ಪ್ರಕಾರ, ‘ಯಮುನಾ ಮಾಸ್ಟರ್ ಪ್ಲಾನ್’ ಗಾಗಿ, ಕೇಂದ್ರ ಜಲಶಕ್ತಿ ಸಚಿವಾಲಯವು ಗುಜರಾತ್‌ನ ಸಬರಮತಿ ನದಿ ತೀರವನ್ನು ನಿರ್ಮಿಸಿದ ತಜ್ಞರನ್ನು ಸಂಪರ್ಕಿಸಿದೆ. ಜತೆಗೆ ಸಚಿವಾಲಯವು ಇದಕ್ಕೆ ಸಂಬಂಧಿಸಿ ಕೆಲವು ಸಭೆಗಳನ್ನೂ ನಡೆಸಿದೆ ಎನ್ನಲಾಗಿದೆ.
ಯಮುನಾ ಶುದ್ಧೀಕರಣ ಯೋಜನೆಯು ನಾಲ್ಕು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಅವೆಂದರೆ- ನೀರಿನಲ್ಲಿರುವ ತ್ಯಾಜ್ಯಗಳನ್ನು ತೆಗೆದುಹಾಕುವುದು, ಪ್ರಮುಖ ಚರಂಡಿಗಳನ್ನು ಸ್ವಚ್ಛಗೊಳಿಸುವುದು, ಒಳಚರಂಡಿ ಸಂಸ್ಕರಣಾ ಘಟಕಗಳ ಕಟ್ಟುನಿಟ್ಟಿನ ಮೇಲ್ವಿಚಾರಣೆ ಮತ್ತು ಸಂಸ್ಕರಣಾ ಮೂಲಸೌಕರ್ಯಗಳ ವಿಸ್ತರಣೆ.
ಇತ್ತೀಚೆಗೆ ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ, ರೇಖಾ ಗುಪ್ತಾ ಅವರು ತಮ್ಮ ಸಂಪುಟ ಸಚಿವರೊಂದಿಗೆ ವಾಸುದೇವ್ ಘಾಟ್ ಗೆ ತೆರಳಿ ಯಮುನಾ ಆರತಿ ಮಾಡಿದ್ದರು. ಗುಪ್ತಾ ಅವರಿಗೆ ಪಕ್ಷದ ಮುಖಂಡರಾದ ಬೈಜಯಂತ್ ಜಯ್ ಪಾಂಡಾ, ಪರ್ವೇಶ್ ವರ್ಮಾ, ಆಶಿಶ್ ಸೂದ್, ಮಂಜಿಂದರ್ ಸಿಂಗ್ ಸಿರ್ಸಾ ಮತ್ತು ಕಪಿಲ್ ಮಿಶ್ರಾ ಸಾಥ್ ನೀಡಿದ್ದರು. ಇದರ ವಿಡಿಯೋವನ್ನು ದೆಹಲಿ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು.
ಯಮುನಾದಲ್ಲಿ ಹೆಚ್ಚುತ್ತಿರುವ ಮಾಲಿನ್ಯಕಾರಕಗಳ ಮಟ್ಟವು ದೆಹಲಿ ಚುನಾವಣೆ ವೇಳೆ ಆಪ್ ಮತ್ತು ಬಿಜೆಪಿ ನಡುವೆ ಭಾರೀ ವಾಕ್ಸಮರಕ್ಕೆ ಕಾರಣಗಾಗಿತ್ತು. ಬಿಜೆಪಿ ಆಡಳಿತದ ಹರಿಯಾಣ ರಾಜ್ಯವು ರಾಷ್ಟ್ರ ರಾಜಧಾನಿಯ ನೀರು ಸರಬರಾಜಿಗೆ ಅಡ್ಡಿ ಉಂಟುಮಾಡಲು ಯಮುನಾ ನದಿಗೆ ವಿಷವನ್ನು ಬೆರೆಸುತ್ತಿದೆ ಎಂದು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ಈ ವಿಚಾರ ಭಾರೀ ವಿವಾದ ಸೃಷ್ಟಿಸಿತ್ತು.