ಬೆಂಗಳೂರು: ಮೊಬೈಲ್ ರಿಚಾರ್ಜ್ ಇರಲಿ, ಗ್ಯಾಸ್, ವಿದ್ಯುತ್ ಬಿಲ್ ಪಾವತಿಯೇ ಇರಲಿ, ಗೂಗಲ್ ಪೇ, ಫೋನ್ ಪೇಯಂತಹ ಯುಪಿಐ ಆಧಾರಿತ ಪಾವತಿ ವೇದಿಕೆಗಳು ಈಗ ಹೆಚ್ಚುವರಿ ಶುಲ್ಕಗಳನ್ನು ವಿಧಿಸುತ್ತಿವೆ. ಪ್ರತಿ ರಿಚಾರ್ಜಿಗೆ 3 ರೂಪಾಯಿ ನಿಗದಿಪಡಿಸಿದ್ದ ಗೂಗಲ್ ಪೇ, ಕೆಲ ದಿನಗಳ ಹಿಂದಷ್ಟೇ ಗ್ಯಾಸ್, ವಿದ್ಯುತ್ ಬಿಲ್ ಪಾವತಿಗೆ ಶೇ.0.5ರಿಂದ ಶೇ.1ರಷ್ಟು ಕನ್ವಿನಿಯನ್ಸ್ ಫೀ ಕಟ್ಟಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಗಳ ಮೂಲಕ ಹಣ ಪಾವತಿಸಿದರೂ ಶುಲ್ಕ ಪಾವತಿಸಬೇಕಾಗುತ್ತದೆ.
ಗೂಗಲ್ ಪೇ ಹಾಗೂ ಫೋನ್ ಪೇ ಕಂಪನಿಗಳು ಈ ದಿಸೆಯಲ್ಲಿ ಹೊಸ ನೀತಿಯನ್ನು ಜಾರಿಗೆ ತಂದಿವೆ. ಗೂಗಲ್ ಪೇ ಮೂಲಕ ಕ್ರೆಡಿಟ್ ಕಾರ್ಡ್ ಬಳಸಿ ವಿದ್ಯುತ್ ಬಿಲ್ ಪಾವತಿಸಿದರೆ, 15 ರೂ. ಕನ್ವಿನಿಯನ್ಸ್ ಫೀ ಕಟ್ಟಬೇಕಾಗುತ್ತದೆ. ಫೋನ್ ಪೇನಲ್ಲಂತೂ 40 ರೂಪಾಯಿ ರಿಚಾರ್ಜ್ ಮಾಡಿದರೂ, 1 ರೂಪಾಯಿ ಕನ್ವಿನಿಯನ್ಸ್ ಫೀ ಕಟ್ಟಬೇಕು.
ಮೊದಲೆಲ್ಲ ಬಿಲ್ ಪಾವತಿಸಿದರೆ, ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡಿದರೆ ಗೂಗಲ್ ಪೇ ಸೇರಿ ಹಲವು ಕಂಪನಿಗಳು ಕ್ಯಾಶ್ ಬ್ಯಾಕ್ ಕೊಡುತ್ತಿದ್ದವು. ಆದರೆ, ಈಗ ರಿಚಾರ್ಜ್ ಮಾಡಿದರೆ ಕ್ಯಾಶ್ ಬ್ಯಾಕ್ ಬಿಡಿ, ಹೆಚ್ಚುವರಿ ಶುಲ್ಕ ನೀಡಬೇಕಾಗಿದೆ. ಫೋನ್ ಪೇ, ಗೂಗಲ್ ಪೇ, ಪೇಟಿಎಂ ಸೇರಿ ಬಹುತೇಕ ಕಂಪನಿಗಳು ಹೆಚ್ಚುವರಿ ಶುಲ್ಕ ವಿಧಿಸುತ್ತಿವೆ. ಇದು ಗ್ರಾಹಕರ ಜೇಬಿಗೆ ಹೊರೆಯಾಗುತ್ತದೆ.
ಶುಲ್ಕ ಕಟ್ಟದೆ ರಿಚಾರ್ಜ್ ಹೇಗೆ?
ಹೆಚ್ಚುವರಿ ಶುಲ್ಕವನ್ನು ಪಾವತಿಸದೆಯೂ ರಿಚಾರ್ಜ್ ಮಾಡಿಕೊಳ್ಳಬೇಕಾಗಿದೆ. ಗೂಗಲ್ ಪೇ ಸೇರಿ ಯಾವುದೇ ಯುಪಿಐ ಪ್ಲಾಟ್ ಫಾರ್ಮ್ ಗಳ ಮೂಲಕ ಹಣ ಪಾವತಿಸುವಾಗ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಸದೆ, ಯುಪಿಐ ಮೂಲಕ ನೇರವಾಗಿ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳ್ಳುವಂತೆ ರಿಚಾರ್ಜ್ ಮಾಡಿಕೊಳ್ಳಬೇಕು. ಆಗ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ.
ಮೊಬೈಲ್ ರಿಚಾರ್ಜ್ ವಿಷಯಕ್ಕೆ ಬಂದರೆ, ಆಯಾ ಟೆಲಿಕಾಂ ಕಂಪನಿಗಳ ಆ್ಯಪ್ ಗಳಿಂದ ನೇರವಾಗಿ ರಿಚಾರ್ಜ್ ಮಾಡಿಕೊಳ್ಳಬಹುದು. ಉದಾಹರಣೆಗೆ, ನೀವು ಜಿಯೋ ಸಿಮ್ ಬಳಸುತ್ತಿದ್ದರೆ, ಮೈ ಜಿಯೋ ಆ್ಯಪ್ ಮೂಲಕ ಹೆಚ್ಚುವರಿ ಶುಲ್ಕವಿಲ್ಲದೆ ರಿಚಾರ್ಜ್ ಮಾಡಿಕೊಳ್ಳಬಹುದು. ಇನ್ನು, ಅಮೆಜಾನ್ ಪೇ ಯಾವುದೇ ರಿಚಾರ್ಜ್ ಗೆ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ.