ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ (Chikkaballapur) ಹಕ್ಕಿ ಜ್ವರ (Bird flu)ದ ಆತಂಕ ಎದುರಾಗಿದ್ದು, ಜಿಲ್ಲಾಡಳಿತ ಈಗ ಕೋಳಿಗಳ ಮಾರಣಹೋಮಕ್ಕೆ ಮುಂದಾಗಿದೆ.
ಹಕ್ಕಿ ಜ್ವರ ದೃಢಪಟ್ಟಿರುವುದಾಗಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಹೇಳಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು. ಭೂಪಾಲ್‍ನ ಪ್ರಯೋಗಾಲಯ ನೀಡಿದ ವರದಿಯಿಂದ ವರದಹಳ್ಳಿ ಗ್ರಾಮದಲ್ಲಿ ಹಕ್ಕಿ ಜ್ವರ ಪತ್ತೆಯಾಗಿರುವುದು ದೃಢವಾಗಿದೆ. ಸಂತೆಯಿಂದ ಕೋಳಿ ತಂದು ಸಾಕಾಣಿಕೆ ಮಾಡಿರುವುದರಿಂದ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿದೆ ಎಂದಿದ್ದಾರೆ.
ಗ್ರಾಮದಲ್ಲಿನ ಕೋಳಿಗಳ ಹತ್ಯೆಗೆ ಕ್ರಮ ಕೈಗೊಳ್ಳಲಾಗುವುದು. ವರದಹಳ್ಳಿ ಗ್ರಾಮದ ಜನರ ಬಳಿ ಕೋಳಿಗಳನ್ನು ಕೊಡಲು ಮನವಿ ಮಾಡುತ್ತೇನೆ. ಕೋಳಿಗಳನ್ನು ಪಡೆದು ನಿಯಾಮಾನುಸಾರ ನಿಗದಿತ ಪ್ರದೇಶಗಳಲ್ಲಿ ಕೋಳಿಗಳ ಹತ್ಯೆ ಮಾಡಿ ಮುಚ್ಚಿ ಹಾಕುತ್ತೇವೆ. ವೈರಸ್ ಹರಡದಂತೆ ತಡೆಯಲು ಕೋಳಿಗಳ ಹತ್ಯೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.