ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸತತ 45 ದಿನಗಳ ಕಾಲ ನಡೆದ ಮಹಾ ಕುಂಭ ಮೇಳ ಮಹಾಶಿವರಾತ್ರಿಯ ದಿನವಾದ ಬುಧವಾರ ಮುಕ್ತಾಯಗೊಂಡಿದೆ. ದೇಶ-ವಿದೇಶಗಳ 66 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತರಾಗಿದ್ದಾರೆ. ಇದರ ಬೆನ್ನಲ್ಲೇ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ, ‘ಏಕತೆಯ ಮಹಾ ಯಜ್ಞ ಪೂರ್ಣಗೊಂಡಿದೆ. ತೀರ್ಥಯಾತ್ರೆಯ ಸಮಯದಲ್ಲಿ ಭಕ್ತರು ಯಾವುದೇ ಅನಾನುಕೂಲತೆ ಎದುರಿಸಿದ್ದರೆ, ಅದಕ್ಕೆ ಕ್ಷಮೆಯಿರಲಿ’ ಎಂದಿದ್ದಾರೆ.
“ಪ್ರಯಾಗ್‌ರಾಜ್‌ನಲ್ಲಿ ನಡೆದ ಏಕತೆಯ ಮಹಾ ಕುಂಭದಲ್ಲಿ 45 ದಿನಗಳ ಕಾಲ 140 ಕೋಟಿ ದೇಶವಾಸಿಗಳ ನಂಬಿಕೆ ಒಗ್ಗೂಡಿತು. ಆ ನಂಬಿಕೆಯು ಈ ಒಂದು ಉತ್ಸವದಲ್ಲಿ ಸೇರಿಕೊಂಡ ರೀತಿ ಅದ್ಭುತವಾದದ್ದು! ಮಹಾಕುಂಭವು ಸಂಪನ್ನವಾದ ಬಳಿಕ ನನ್ನ ಮನಸ್ಸಿಗೆ ಬಂದ ಆಲೋಚನೆಗಳನ್ನು ಬರೆಯಲು ನಾನು ಪ್ರಯತ್ನಿಸಿದ್ದೇನೆ. ಯಾವಾಗ ಒಂದು ರಾಷ್ಟ್ರದ ಪ್ರಜ್ಞೆ ಜಾಗೃತವಾಗುತ್ತದೋ, ಯಾವಾಗ ಅದು ನೂರಾರು ವರ್ಷಗಳ ಗುಲಾಮಗಿರಿಯ ಮನಸ್ಥಿತಿಯ ಎಲ್ಲಾ ಸಂಕೋಲೆಗಳನ್ನು ಮುರಿದು, ಹೊಸ ಪ್ರಜ್ಞೆಯೊಂದಿಗೆ ಉಸಿರಾಡಲು ಪ್ರಾರಂಭಿಸುತ್ತದೋ, ಆಗ ಕಾಣುವಂಥ ದೃಶ್ಯವನ್ನೇ ನಾವು ಜನವರಿ 13ರಿಂದ ಪ್ರಯಾಗ್‌ರಾಜ್‌ನಲ್ಲಿ ನಡೆದ ಏಕತೆಯ ಮಹಾ ಕುಂಭದಲ್ಲಿ ಕಂಡಿತು” ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.
45 ದಿನಗಳ ಕಾಲ ನಡೆದ ಮಹಾ ಕುಂಭ ಸಂಪನ್ನವಾದುದರ ಅಂಗವಾಗಿ ಬುಧವಾರ ರಾತ್ರಿ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದ ಮೇಲೆ ಸುಡುಮದ್ದುಗಳ ಅದ್ಭುತ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಲೇಸರ್ ಲೈಟ್ ಶೋ ಜೊತೆಗೆ ಆಗಸದಲ್ಲಿ ಪಟಾಕಿಗಳ ಚಿತ್ತಾರದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಜನವರಿ 13ರಂದು ಆರಂಭವಾಗಿ ಫೆ.26ಕ್ಕೆ ಕೊನೆಗೊಂಡ ಮಹಾಕುಂಭಮೇಳದಲ್ಲಿ 66.21 ಕೋಟಿಗೂ ಹೆಚ್ಚು ಭಕ್ತರು ಭಾಗವಹಿಸಿದ್ದರು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ರಾಜಕಾರಣಿಗಳು, ಕ್ರೀಡಾಪಟುಗಳು, ಕೈಗಾರಿಕೋದ್ಯಮಿಗಳು ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ದೇಶ ಮತ್ತು ವಿದೇಶಗಳ ಅನೇಕರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.