ನವದೆಹಲಿ: ಸದನದಲ್ಲಿ ಕೋಲಾಹಲ ಸೃಷ್ಟಿಸಿದ್ದಕ್ಕಾಗಿ ಮೂರು ದಿನಗಳ ಅವಧಿಗೆ ಅಮಾನತುಗೊಂಡಿರುವ ಆಪ್ ಶಾಸಕರು ಗುರುವಾರ ದೆಹಲಿ ವಿಧಾನಸಭೆಗೆ ಪ್ರವೇಶಿಸಲು ಯತ್ನಿಸಿದ್ದು, ಅವರನ್ನು ಒಳಗೆ ಬರದಂತೆ ತಡೆದ ಘಟನೆ ನಡೆದಿದೆ. ವಿಧಾನಸಭಾ ಸಂಕೀರ್ಣವನ್ನು ಪ್ರವೇಶಿಸದಂತೆ ತಡೆಯಲು ಪ್ರವೇಶ ರಸ್ತೆಯಲ್ಲೇ ಬ್ಯಾರಿಕೇಡ್‌ಗಳನ್ನು ಇರಿಸಲಾಗಿತ್ತು ಎಂದು ಆಪ್ ಶಾಸಕರು ಆರೋಪಿಸಿದ್ದಾರೆ.
ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿ ಆತಿಶಿ ಮರ್ಲೇನಾ ಈ ಕ್ರಮವನ್ನು ಖಂಡಿಸಿದ್ದು, ಬಿಜೆಪಿ “ಸರ್ವಾಧಿಕಾರ”ವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ ಎಂದು ಆರೋಪಿಸಿದ್ದಾರೆ.
‘ಜೈ ಭೀಮ್’ ಘೋಷಣೆ ಕೂಗಿದ್ದಕ್ಕಾಗಿ ಆಪ್ ಶಾಸಕರನ್ನು ಮೂರು ದಿನಗಳ ಕಾಲ ಸದನದಿಂದ ಅಮಾನತುಗೊಳಿಸಲಾಗಿದೆ. ಇಂದು, ಅವರನ್ನು ವಿಧಾನಸಭೆ ಆವರಣಕ್ಕೆ ಪ್ರವೇಶಿಸಲು ಸಹ ಅನುಮತಿಸುತ್ತಿಲ್ಲ. ದೆಹಲಿ ವಿಧಾನಸಭೆಯ ಇತಿಹಾಸದಲ್ಲಿ ಇಂಥದ್ದೊಂದು ಘಟನೆ ಎಂದಿಗೂ ಸಂಭವಿಸಿಲ್ಲ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ದೆಹಲಿ ವಿಧಾನಸಭೆಯ ಹೊರಗೆ, ಆಪ್ ನಾಯಕಿ ಆತಿಶಿ ಅವರು ಅಸೆಂಬ್ಲಿ ಆವರಣ ಪ್ರವೇಶಿಸದಂತೆ ಪೊಲೀಸರು ತಡೆದರು. ಆಗ ಅಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಆತಿಶಿ, ನಮ್ಮನ್ನು ತಡೆಯುವಂತೆ ನಿರ್ದೇಶನವಿರುವ ಆದೇಶದ ಪ್ರತಿಯನ್ನು ತೋರಿಸಿ ಎಂದು ಆಗ್ರಹಿಸಿದ್ದು ಕಂಡುಬಂತು.
ಅದಕ್ಕೆ ಪೊಲೀಸರು “ಇದು ಸ್ಪೀಕರ್ ನಿರ್ದೇಶನ” ಎಂದು ಪ್ರತಿಕ್ರಿಯಿಸಿದರು. ಇದರಿಂದ ಸಮಾಧಾನಗೊಳ್ಳದ ಅತಿಶಿ, ಶಾಸಕರು ಪ್ರವೇಶಿಸುವಂತಿಲ್ಲ ಎಂದು ಎಲ್ಲಿ ಬರೆಯಲಾಗಿದೆ? ನನಗೆ ಅಧಿಕೃತ ದಾಖಲೆಯನ್ನು ತೋರಿಸಿ ಎಂದು ಒತ್ತಾಯಿಸಿದರು.
ಏತನ್ಮಧ್ಯೆ, ಆಪ್ ಶಾಸಕರ ಅಮಾನತು ಆದೇಶವನ್ನು ದೆಹಲಿ ಸಚಿವ ಪರ್ವೇಶ್ ವರ್ಮಾ ಸಮರ್ಥಿಸಿಕೊಂಡಿದ್ದು, ಶಾಸಕರು ಸದನದ ಕಲಾಪಗಳಿಗೆ ಅಡ್ಡಿಪಡಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಸದನವನ್ನುದ್ದೇಶಿಸಿ ಮಾತನಾಡುವಾಗ ಶಾಸಕರು) ಘೋಷಣೆಗಳನ್ನು ಕೂಗುವಂತಿಲ್ಲ. ಆದರೆ, ಅವರು ಎಲ್ಲ ನಿಯಮ, ಕಾನೂನುಗಳನ್ನು ಉಲ್ಲಂಘಿಸಿದ್ದಾರೆ” ಎಂದು ಹೇಳಿದರು.
21 ಶಾಸಕರ ಅಮಾನತು
ಆಪ್ ಸರ್ಕಾರ ಅಧಿಕಾರದಲ್ಲಿದ್ದಾಗ ತಂದಿದ್ದ ಮದ್ಯ ನೀತಿ ಕುರಿತಾದ ಸಿಎಜಿ ವರದಿಗೆ ಸಂಬಂಧಿಸಿ ಇತ್ತೀಚೆದೆ ದೆಹಲಿ ವಿಧಾನಸಭೆಯಲ್ಲಿ ಭಾರೀ ಕೋಲಾಹಲ ಉಂಟಾಗಿತ್ತು. ಲೆಫ್ಟಿನೆಂಟ್ ಗವರ್ನರ್ ಸದನವನ್ನು ಉದ್ದೇಶಿಸಿ ಮಾತನಾಡುವ ವೇಳೆ ಆಪ್ ಶಾಸಕರು ಘೋಷಣೆಗಳನ್ನು ಕೂಗಲಾರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಆತಿಶಿ ಸೇರಿದಂತೆ 21 ಆಪ್ ಶಾಸಕರನ್ನು ರಾಜ್ಯ ವಿಧಾನಸಭೆಯಿಂದ ಅಮಾನತುಗೊಳಿಸಲಾಗಿತ್ತು.
ದೆಹಲಿಯಲ್ಲಿ ಹಿಂದಿನ ಆಮ್ ಆದ್ಮಿ ಪಕ್ಷದ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ಮದ್ಯ ನೀತಿಯಿಂದ ಬೊಕ್ಕಸಕ್ಕೆ ಒಟ್ಟು 2,002 ಕೋಟಿ ರೂ.ಗಳ ಆದಾಯ ನಷ್ಟವಾಗಿದೆ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ. 2017-18ರಿಂದ 2020-21ರವರೆಗಿನ ಅವಧಿಯನ್ನು ಒಳಗೊಂಡ ಸಿಎಜಿ ವರದಿಯು ಪ್ರಮುಖ ಆರ್ಥಿಕ ಲೋಪಗಳನ್ನು ಎತ್ತಿ ತೋರಿಸಿದೆ.