ನವದೆಹಲಿ: ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದೆ. ದೇಶದ ಎಲ್ಲ ನಾಗರಿಕರಿಗೆ ಅನ್ವಯವಾಗುವ ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯದ ಮೂಲಗಳು ತಿಳಿಸಿವೆ. ಹಾಗಾಗಿ, ಅಸಂಘಟಿತ ವಲಯದ ಕಾರ್ಮಿಕರು, ಸ್ವಯಂ ಉದ್ಯೋಗಿಗಳಿಗೆ ಅನ್ವಯವಾಗುವ ಹೊಸ ಪಿಂಚಣಿ ಯೋಜನೆ ಜಾರಿಗೆ ಬರುವ ಲಕ್ಷಣಗಳು ಗೋಚರಿಸಿವೆ. ಇದರಿಂದ ಅಸಂಘಟಿತ ವಲಯದವರೂ ಹಣ ಉಳಿಸುವ, ಪಿಂಚಣಿ ಪಡೆಯುವ ಸೌಲಭ್ಯಗಳು ದೊರೆಯಲಿವೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಅಟಲ್ ಪಿಂಚಣಿ ಯೋಜನೆ ಅನ್ವಯ ಅಸಂಘಟಿತ ವಲಯದ ಕಾರ್ಮಿಕರು 60 ವರ್ಷ ಹೂಡಿಕೆಯ ನಂತರ 1,000-1,500 ರೂ.ವರೆಗೆ ಮಾಸಿಕ ಪಿಂಚಣಿ ಪಡೆಯಬಹುದಾಗಿದೆ. ಇದಕ್ಕಿಂತ ಹೆಚ್ಚಿನ ಸೌಲಭ್ಯಗಳು ಇರುವ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆದಿದೆ ಎನ್ನಲಾಗಿದೆ. ಯೋಜನೆ ಅಂತಿಮವಾದ ಬಳಿಕವೇ ಎಲ್ಲ ಸೌಕರ್ಯಗಳ ಬಗ್ಗೆ ಮಾಹಿತಿ ದೊರೆಯಲಿದೆ.
ಉಳಿತಾಯ ಹೇಗೆ ಮಾಡಬಹುದು?
ಸಾರ್ವತ್ರಿಕ ಪಿಂಚಣಿ ಯೋಜನೆ ಅನ್ವಯ ಅಸಂಘಟಿತ ವಲಯದ ಕಾರ್ಮಿಕರು ಸ್ವಯಂಪ್ರೇರಿತವಾಗಿ ಉಳಿತಾಯ ಮಾಡಬಹುದಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ ಯಾವುದೇ ಹಣ ಹೂಡಿಕೆ ಮಾಡುವುದಿಲ್ಲ. ಸಂಘಟಿತ ವಲಯದ ಉದ್ಯೋಗಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೂ ಈ ಯೋಜನೆ ಅನ್ವಯವಾಗಲಿದೆ ಎಂದು ತಿಳಿದುಬಂದಿದೆ. ಇದು ಈಗಿರುವ ಇಪಿಎಫ್ಒ ರೀತಿಯ ಯೋಜನೆಗಳಿಗಿಂತ ಭಿನ್ನವಾಗಿರಲಿದೆ ಎಂದು ಮೂಲಗಳು ತಿಳಿಸಿವೆ.
ಪಿಎಫ್ ರೀತಿಯ ಯೋಜನೆ ಅಲ್ಲ
ಸಂಘಟಿತ ವಲಯದ ಉದ್ಯೋಗಿಗಳಿಗೆ ಇಪಿಎಫ್ಒ ಮೂಲಕ ಹಲವು ಸೌಲಭ್ಯಗಳಿವೆ. ಇಲ್ಲಿ ಉದ್ಯೋಗಿಯು ಒಂದಷ್ಟು ಹಣವನ್ನು ಉಳಿಸಿದರೆ, ಅಷ್ಟೇ ಮೊತ್ತವನ್ನು ಕಂಪನಿಯು ಪಿಎಫ್ ಖಾತೆಗೆ ಜಮೆ ಮಾಡುತ್ತವೆ. ಈ ಮೊತ್ತಕ್ಕೆ ಇಪಿಎಫ್ಒದಿಂದ ಪ್ರತಿ ವರ್ಷ ಶೇ.8.25ರಷ್ಟು ಬಡ್ಡಿಯೂ ದೊರೆಯುತ್ತದೆ. ಇದು ಹೆಚ್ಚಿನ ಹಣ ಉಳಿಸಲು ನೆರವಾಗುತ್ತದೆ. ಇಂತಹ ಸೌಲಭ್ಯಗಳು ಸಾರ್ವತ್ರಿಕ ಪಿಂಚಣಿ ಯೋಜನೆಯಲ್ಲಿ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ, ಅಸಂಘಟಿತ ವಲಯದ ಕಾರ್ಮಿಕರು ಹಣ ಉಳಿಸಲು ಇದು ನೆರವಾಗಲಿದೆ ಎಂದು ತಿಳಿದುಬಂದಿದೆ.
ಎನ್ ಪಿ ಎಸ್ ಬದಲಾವಣೆ ಇಲ್ಲ
ಸಾರ್ವತ್ರಿಕ ಪಿಂಚಣಿ ಯೋಜನೆಯನ್ನು ‘ಹೊಸ ಪಿಂಚಣಿ ಯೋಜನೆ’ ಎಂದು ಕರೆಯಲಾಗುತ್ತಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ‘ರಾಷ್ಟ್ರೀಯ ಪಿಂಚಣಿ ಯೋಜನೆ’ಯನ್ನು ಬದಲಾಯಿಸುವುದಿಲ್ಲ ಅಥವಾ ವಿಲೀನಗೊಳಿಸುವುದಿಲ್ಲ ಎಂದು ಸಚಿವಾಲಯದ ಮೂಲಗಳು ಸ್ಪಷ್ಟಪಡಿಸಿವೆ. ಯೋಜನೆ ಪ್ರಸ್ತಾವನೆ ಪೂರ್ಣಗೊಂಡ ನಂತರ, ಸಂಬಂಧಪಟ್ಟವರ ಜ ಸಮಾಲೋಚನೆ ನಡೆಸಿ ಅಂತಿಮವಾಗಿ ಸಾರ್ವತ್ರಿಕ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.