ಬಾಲಿವುಡ್ ನಟ ಶಾರುಖ್ ಖಾನ್ ಅವರು ತಮ್ಮ ಪತ್ನಿ, ಮಕ್ಕಳೊಂದಿಗೆ ಪ್ರೀತಿಯ ಮನೆ ‘ಮನ್ನತ್’ ಅನ್ನು ಬಿಟ್ಟು ಬೇರೆಡೆಗೆ ಸ್ಥಳಾಂತರವಾಗಲಿದ್ದಾರೆ ಎಂಬುದಾಗಿ ವರದಿಯಾಗಿದೆ. ಎರಡು ದಶಕದಿಂದ ಅವರ ಕುಟುಂಬ ಈ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ, ಅವರು ಮನೆ ತೊರೆಯುವುದು ನಿಜ. ಆದರೆ ಅದು ತಾತ್ಕಾಲಿಕ ನಿರ್ಣಯ ಎಂದು ಹೇಳಲಾಗಿದೆ.
ಭವ್ಯ ಬಂಗಲೆ ‘ಮನ್ನತ್’ ನವೀಕರಣ ಕೆಲಸಗಳು ಪ್ರಾರಂಭವಾಗಿರುವುದರಿಂದ ಮತ್ತು ಬಂಗಲೆಯನ್ನು ವಿಸ್ತರಣೆ ಮಾಡುವ ಯೋಜನೆಯಿರುವುದರಿಂದ ಎರಡು ವರ್ಷಗಳ ಕಾಲ ಶಾರುಖ್ ಕುಟುಂಬ ಬೇರೆ ಕಡೆ ವಾಸಿಸಲಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಸದ್ಯ ಶಾರುಖ್ ಅವರು ಮುಂಬೈನ ಪಾಲಿ ಹಿಲ್ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ವೊಂದನ್ನು ವರ್ಷಕ್ಕೆ ₹2.9 ಕೋಟಿಗೆ ಬಾಡಿಗೆಗೆ ಪಡೆದುಕೊಂಡಿದ್ದಾರೆ. ಮನ್ನತ್‌ನ ನವೀಕರಣ ಕೆಲಸಗಳು ಇದೇ ಮೇ ತಿಂಗಳಿನಲ್ಲಿ ಆರಂಭವಾಗಲಿದೆ. ಕೆಲಸ ಮುಗಿದ ಬಳಿಕ ಅವರು ಮನ್ನತ್ಗೆ ಮರಳಲಿದ್ದಾರೆ.
ಸಮುದ್ರಕ್ಕೆ ಅಭಿಮುಖವಾಗಿ ನಿರ್ಮಿಸಿರುವ ಭವ್ಯ ಬಂಗಲೆ ಮನ್ನತ್ ನಲ್ಲಿ ಶಾರುಖ್ ಕುಟುಂಬವು 2005ರಿಂದ ವಾಸಿಸುತ್ತಿದೆ. ಶಾರುಖ್ ಹಾಗೂ ಅವರ ಅಭಿಮಾನಿಗಳಿಗೆ ಈ ಬಂಗಲೆ ಒಂದು ರೀತಿಯ ಭಾವನಾತ್ಮಕ ಸಂಬಂಧ ಸೃಷ್ಟಿಸಿದೆ. ಶಾರುಖ್ ಹುಟ್ಟುಹಬ್ಬದ ದಿನ ಈ ಬಂಗಲೆಯ ಎದುರುಗಡೆ ಜಮಾಯಿಸುವ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದರು.