ಹುಬ್ಬಳ್ಳಿ: ಪೌಷ್ಟಿಕ ಆಹಾರವನ್ನು ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 18 ಜನ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ 32 ಜನರನ್ನು ಬಂಧಿಸಿದ್ದಾರೆ. ಆದರೆ, ಪ್ರಕರಣದ ಕಿಂಗ್ ಪಿನ್ ಮಾತ್ರ 13 ದಿನ ಕಳೆದರೂ ಪತ್ತೆಯಾಗಿಲ್ಲ. ಹೀಗಾಗಿ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿವೆ.
ಬಡ ಮಕ್ಕಳಿಗೆ, ಬಾಣಂತಿಯರಿಗೆ ಮತ್ತು ಗರ್ಭಿಣಿಯರಿಗೆ ವಿತರಣೆ ಮಾಡಬೇಕಾದ ಲಕ್ಷಾಂತರ ರೂ. ಮೌಲ್ಯದ ಪೌಷ್ಟಿಕ ಆಹಾರದ ಪಾಕೇಟ್ ಗಳನ್ನು ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಈ ಪ್ರಕರಣವನ್ನು ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸರು ಬೇಧಿಸಿದ್ದರು.
ಈ ಪ್ರಕರಣದ ಪ್ರಮುಖ ಕಿಂಗ್ ಪಿನ್ ಬೈತೂಲ್ಲಾ ಕಿಲ್ಲೇದಾರ ಹಾಗೂ ಪತಿ ಫಾರೂಕ್ ಮಕ್ಕಳ ಅನ್ನಕ್ಕೆ ಕನ್ನ ಹಾಕಿ ರಾಜ್ಯ ರಾಜ್ಯ ಸುತ್ತುತ್ತಿದ್ದಾರೆ. ಇವರ ಪತ್ತೆಗೆ ಪೊಲೀಸರು ನಾಲ್ಕು ತಂಡ ಮಾಡಿ ಗೋವಾ ಮಹಾರಾಷ್ಟ್ರ ಸುತ್ತಿದ್ದಾರೆ. ಇವರಿಬ್ಬರೂ ಕಾಂಗ್ರೆಸ್ ನಾಯಕರಾಗಿರುವುದರಿಂದ ಇವರು ತಪ್ಪಿಸಿಕೊಳ್ಳಲು ಪ್ರಭಾವಿಗಳ ಕೈವಾಡವಿರಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಕಳೆದ 13 ದಿನಗಳಿಂದ ನಾಪತ್ತೆಯಾಗಿರುವ ಕೈ ನಾಯಕಿ ಬೈತೂಲ್ಲಾ ಕಿಲ್ಲೇದಾರ ಹಾಗೂ ಫಾರುಕ್ ದರ್ಗಾಗೆ ಹೋಗಿದ್ದಾರೆಂಬ ಮಾಹಿತಿ ಸಿಕ್ಕಿದ್ದು, ಪೊಲೀಸರು ಕೂಡ ಆ ಕಡೆ ಮುಖ ಮಾಡಿದ್ದಾರೆ. ಅಲ್ಲದೇ ಆರೋಪಿಗಳು ತಲೆಮರೆಸಿಕೊಳ್ಳಲು ಸಹಾಯ ಮಾಡಿದ 6 ಜನರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಅಲ್ತಾಫ್ ಕಲಾದಗಿ, ಸಲೀಂ ಬೇಪಾರಿ, ಸಲೀಂ ಶೇಖ್, ಸಲೀಂ ಅತ್ತಾರ, ದಾಪೀರ್ ಚೌಧರಿ ಮತ್ತು ಬಸವರಾಜ ವಾಲ್ಮೀಕಿ ಎನ್ನುವ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಸದ್ಯ ಆರೋಪಿಗಳ ವಿರುದ್ಧ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಮತ್ತೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪ್ರಕರಣದಿಂದ ಸ್ಥಳೀಯರಲ್ಲಿ ಆತಂಕ, ಜೊತೆಗೆ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪಂಚರ ಸಮಕ್ಷಮ ಬೈತೂಲ್ಲಾ ಮನೆಯಲ್ಲಿ ಪರಿಶೀಲನೆ ವೇಳೆ ಕೆಲ ಆಹಾರದ ಪಾಕೆಟ್ಗಳು ಪತ್ತೆಯಾಗಿದ್ದವು. ಹೀಗಾಗಿ ಮತ್ತೊಂದು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಒಂದು ಸಮುದಾಯಕ್ಕೆ ಅವಹೇಳನ ಮಾಡಿರುವ ವಿಚಾರವಾಗಿಯೂ ಬೈತೂಲ್ಲಾ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಈಗ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ.