ಬೆಂಗಳೂರು:.ಮಹಾಕುಂಭಮೇಳಕ್ಕೆ ತೆರಳಿದ್ದ ವೇಳೆ ಭೀಕರ ಅಪಘಾತ ಉಂಟಾಗಿ ಬೀದರ್ ಜಿಲ್ಲೆಯ ಲಾಡಗಿರಿ ಮೂಲದ ಆರು ಜನರು ಮೃತಪಟ್ಟು, 8 ಜನ ಗಾಯಗೊಂಡಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಸಂಭವಿಸಿದೆ.
ಪ್ರಯಾಗ್ ರಾಜ್ ಕುಂಭಮೇಳದಿಂದ ಹುಟ್ಟೂರಿಗೆ ಮರಳುತ್ತಿರುವ ಸಂದರ್ಭದಲ್ಲಿ ಮತ್ತೆ ಬೀದರ್ ಮೂಲದ ಯಾತ್ರಾರ್ಥಿಗಳಿದ್ದ ವಾಹನ ಅಪಘಾತವಾಗಿದ್ದು, 14 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ವರ್ದಾ ಜಿಲ್ಲೆಯ ಸಾವಗಿ ಬಳಿ ಯಾತ್ರಾರ್ಥಿಗಳ ಟೆಂಪೋ ಟ್ರಾವೆಲರ್ ವಾಹನಕ್ಕೆ ಮತ್ತೊಂದು ಟೆಂಪೋ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ 14 ಜನ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಬೀದರ್, ಹುಮನಾಬಾದ್, ಬಸವಕಲ್ಯಾಣ ಸೇರಿದಂತೆ ಬೀದರ್ ಜಿಲ್ಲೆಯ 9 ಜನ, ಕಲಬುರಗಿ ಜಿಲ್ಲೆಯ ಮೂವರು, ಹೈದರಾಬಾದ್ ಹಾಗೂ ಲಾಥೂರ್ ನ ತಲಾ ಒಬ್ಬರಿಗೆ ಗಾಯಗಳಾಗಿವೆ. ಪ್ರಕಾಶ್, ರೂಪಾ, ಜಗದೀಶ್, ಲತಾ, ದಿಲೀಪ್, ಅರುಣಾಬಾಯಿ, ಮಧುಶ್ರೀ, ಲಕ್ಷ್ಮೀ, ಜ್ಯೋತಿ, ಅನೀಲ್, ಅನಿತಾ, ನಲುಮಿ, ಪ್ರೀತಿ, ಕಿರಣ್ ಎಂಬುವವರಿಗೆ ಗಾಯಗಳಾಗಿದ್ದು, ಗಾಯಾಳುಗಳು ಮಹಾರಾಷ್ಟ್ರದ ಸಾವಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.