ನವದೆಹಲಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣಿಕ ವರ್ಷದಲ್ಲಿ ಎರಡು ಬಾರಿ ಬೋರ್ಡ್ ಪರೀಕ್ಷೆ ನಡೆಸುವ ದಿಸೆಯಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಮಹತ್ವದ ಹೆಜ್ಜೆ ಇರಿಸಿದೆ. ಎರಡು ಬೋರ್ಡ್ ಪರೀಕ್ಷೆ ನಡೆಸುವ ದಿಸೆಯಲ್ಲಿ ಕರಡು ನಿಯಮಗಳಿಗೆ ಅನುಮೋದನೆ ನೀಡಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಸಿಬಿಎಸ್ಇ ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬೋರ್ಡ್ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ.
ಕರಡು ನಿಯಮಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಇರಿಸಲಾಗುತ್ತದೆ. ಮಾರ್ಚ್ 9ರವರೆಗೆ ಸಾರ್ವಜನಿಕರುಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದಾಗಿದೆ. ಜನರ ಆಕ್ಷೇಪಣೆ, ಅಭಿಪ್ರಾಯಗಳನ್ನು ಸಂಗ್ರಹಿಸಿದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ಕರಡು ನಿಯಮಗಳನ್ನು ಜಾರಿಗೆ ಬಂದರೆ ಇನ್ನು ಮುಂದೆ ಮೊದಲ ಹಂತದ ಪರೀಕ್ಷೆ ಫೆಬ್ರವರಿ 17 ರಿಂದ ಮಾರ್ಚ್ 6 ರವರೆಗೆ ನಡೆಸಲಾಗುವುದು ಮತ್ತು ಎರಡನೇ ಹಂತವನ್ನು ಮೇ 5 ರಿಂದ 20 ರವರೆಗೆ ನಡೆಸಲಾಗುತ್ತದೆ. ಪ್ರಾಯೋಗಿಕ ಪರೀಕ್ಷೆಯನ್ನು ಮಾತ್ರ ಒಮ್ಮೆಯೇ ನಡೆಸಲಾಗುತ್ತದೆ ಎಂದು ಸಿಬಿಎಸ್ಇ ತಿಳಿಸಿದೆ.
ಈ ಎರಡೂ ಪರೀಕ್ಷೆಗಳನ್ನು ಪೂರ್ಣ ಪಠ್ಯಕ್ರಮದಲ್ಲಿ ನಡೆಸಲಾಗುತ್ತದೆ. ಜತೆಗೆ ಅಭ್ಯರ್ಥಿಗಳಿಗೆ ಎರಡು ಆವೃತ್ತಿಗಳಲ್ಲಿ ಒಂದೇ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಲಾಗುತ್ತದೆ. ಅದೇ ರೀತಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಎರಡೂ ಪರೀಕ್ಷೆಗಳಿಗೆ ಪರೀಕ್ಷಾ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಬೋರ್ಡ್ ಪರೀಕ್ಷೆಗಳ ಮೊದಲ ಮತ್ತು ಎರಡನೇ ಆವೃತ್ತಿಗಳು ಪೂರಕ ಪರೀಕ್ಷೆಗಳಾಗಿಯೂ ಇರಲಿವೆ. ಯಾವುದೇ ಪರಿಸ್ಥಿತಿಯಲ್ಲಿ ಬೇರೆ ವಿಶೇಷ ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ. ಸಿಬಿಎಸ್ಇ ತೆಗೆದುಕೊಂಡ ಕ್ರಮವು ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿದೆ.