ಬೆಳಗಾವಿ: ರಾಜ್ಯ ಸಾರಿಗೆ ಬಸ್ ಕಂಡಕ್ಟರ್ ಮೇಲೆ ಮರಾಠಿ ಭಾಷಾ ಪುಂಡರು ಹಲ್ಲೆ ಮಾಡಿರುವ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಈ ವಿಚಾರವಾಗಿ ಎಂಇಎಸ್ ಹಾಗೂ ಕನ್ನಡಿಗರ ಮಧ್ಯೆ ದೊಡ್ಡ ವಿವಾದವೇ ನಡೆಯುತ್ತಿದೆ. ಕರ್ನಾಟಕ ಸಾರಿಗೆ ಬಸ್ ಗೆ ಮಹಾರಾಷ್ಟ್ರದಲ್ಲಿ ಮರಾಠಾ ಭಾಷಾ ಪುಂಡರು ಮಸಿ ಬಳಿದು, ಸಿಬ್ಬಂದಿಗೆ ಬಣ್ಣ ಬಳೆದು ಜೈ ಮಹಾರಾಷ್ಟ್ರ ಹೇಳಿಸಿದ್ದಾರೆ. ಇದಕ್ಕೆ ಕೆಂಡಕಾರಿರುವ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ತಿರುಗೇಟು ನೀಡಿದ್ದಾರೆ.
ಹೀಗಾಗಿ ಬಸ್ ಕಂಡಕ್ಟರ್ ಮಹಾದೇವ ಹುಕ್ಕೇರಿ ಮೇಲಿನ ಹಲ್ಲೆ ಹಾಗೂ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ, ಬೆಳಗಾವಿ ರಾಣಿ ಚೆನ್ನಮ್ಮನ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ವತಿಯಿಂದ ಪ್ರತಿಭಟನೆ ನಡೆಯಿತು.
ರಾಣಿ ಚನ್ನಮ್ಮ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಕನ್ನಡ ಪರ ಕಾರ್ಯಕರ್ತರು ಕನ್ನಡ ಬಾವುಟಗಳನ್ನು ಹಿಡಿದು ಎಂಇಎಸ್, ಶಿವಸೇನೆ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಪ್ರವೀಣ ಶೆಟ್ಟಿ ಹಾಗೂ ಅವರ ಬಣದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಈ ವೇಳೆ ಪ್ರವೀಣ್ ಶೆಟ್ಟಿ ಹಾಗೂ ಕಾರ್ಯಕರ್ತರು ಆಸ್ಪತ್ರೆಗೆ ತೆರಳಿ ಕಂಡಕ್ಟರ್ ಮಹದೇವ್ ಅವರ ಆರೋಗ್ಯ ವಿಚಾರಿಸಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು. ಆನಂತರ ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರನ್ನು ಭೇಟಿ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಒಂದು ವೇಳೆ ಮುಂದಿನ ದಿನಗಳಲ್ಲಿ ಎಂಇಎಸ್ ಪುಂಡರು ಇದೇ ರೀತಿ ಬಾಲ ಬಿಚ್ಚಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.