ಬೆಂಗಳೂರು: ಗ್ಯಾರಂಟಿಗಳಿಗಾಗಿ ದಲಿತ ನಿಗಮಗಳ ಹಣಕ್ಕೆ ಸರ್ಕಾರ ಕತ್ತರಿ ಹಾಕಿದೆ ಎಂಬ ಆರೋಪ ಕೇಳಿ ಬಂದಿದೆ.
ರಾಜ್ಯ ಸರ್ಕಾರವು ದಲಿತ ನಿಗಮಗಳಿಗೆ ಹಂಚಿಕೆಯಾದ ಹಣದಲ್ಲಿ ಶೇ. 25ರಷ್ಟು ಹಣವನ್ನು ಮಾತ್ರ ಬಿಡುಗಡೆ ಮಾಡಿದೆ. 6 ನಿಗಮ, 2 ಆಯೋಗಗಳಿಗೆ 332 ಕೋಟಿ ರೂ. ಹಂಚಿಕೆಯಾಗಿತ್ತು. ಆದರೆ, ಸರ್ಕಾರ ಕೇವಲ 88.78 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಕೇವಲ 2 ಆಯೋಗಗಳಿಗೆ ಮಾತ್ರ ನಿಗದಿಯಾದಷ್ಟು ಹಣ ಬಿಡುಗಡೆ ಮಾಡಿದೆ. ಹೀಗಾಗಿ ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಫಲ ಸಿಗದಂತಾಗುತ್ತಿದೆ. ಇದರಿಂದಾಗಿ ಸರ್ಕಾರ ಕತ್ತರಿ ಹಾಕಿತೇ? ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಗ್ಯಾರಂಟಿ ಯೋಜನೆಗಳಿಗೆ ಆದಾಯ ಹೊಂದಿಸಲು ನಿಗಮಗಳಿಗೆ ಹಂಚಿಕೆಯಾದ ಅನುದಾನಕ್ಕೆ ಕತ್ತರಿ ಹಾಕಲಾಯಿತೇ? ಎಸ್ ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿಗೆ ನೀಡಿದ್ದರಿಂದ ಕಲ್ಯಾಣ ಯೋಜನೆಗೆ ಹಣ ಇಲ್ಲವಾಯಿತೇ? ಅನುದಾನದ ಕೊರತೆಯ ಹಿನ್ನೆಲೆಯಲ್ಲಿ ನಿಗಮ ಹಾಗೂ ಆಯೋಗಗಳ ಆರ್ಥಿಕ ಸಾಧನೆ ಕೇವಲ ಶೇ. 25.68ರಷ್ಟು ಮಾತ್ರ ಆಗಿದೆ. ಗಂಗಾ ಕಲ್ಯಾಣ, ಐರಾವತ ವಾಹನ, ಭೂ ಒಡೆತನ, ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಹಣಕ್ಕೂ ಕತ್ತರಿ ಬಿದ್ದಿದೆ. ವಿದೇಶದಲ್ಲಿ ಉನ್ನತ ವ್ಯಾಸಂಗ, ಪ್ರೇರಣಾ (ಮೈಕ್ರೋ ಫೈನಾನ್ಸ್) ಕಿರು ಸಾಲ, ಸ್ವ ಉದ್ಯೋಗಕ್ಕಾಗಿ ಆರ್ಥಿಕ ನೆರವು ಯೋಜನೆಗಳ ಫಲದಿಂದ ಪರಿಶಿಷ್ಟರು ವಂಚಿತರಾಗಿದ್ದಾರೆ.
ಯಾವ ನಿಗಮಕ್ಕೆ ಎಷ್ಟು ಅನುದಾನ?
- ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಹಂಚಿಕೆಯಾಗಿದ್ದು 100 ಕೋಟಿ ರೂ. ಆದರೆ, ಬಿಡುಗಡೆಯಾಗಿರುವುದು ಕೇವಲ 25 ಕೋಟಿ ರೂ.
- ತಾಂಡಾ ಅಭಿವೃದ್ಧಿ ನಿಗಮಕ್ಕೆ ಹಂಚಿಕೆಯಾಗಿದ್ದು, 60 ಕೋಟಿ ರೂ. ಬಿಡುಗಡೆಯಾಗಿರುವುದು ಕೇವಲ 15 ಕೋಟಿ ರೂ.
-ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಹಂಚಿಕೆಯಾಗಿದ್ದು, 35 ಕೋಟಿ ರೂ. ಬಿಡುಗಡೆಯಾಗಿರುವುದು ಕೇವಲ 8.75 ಕೋಟಿ ರೂ.
-ರಾಜ್ಯ ಸಫಾಯಿ ಕರ್ಮಚಾರಿ ಆಯೋಗಕ್ಕೆ ಹಂಚಿಕೆಯಾಗಿದ್ದು 3.75 ಕೋಟಿ ರೂ. ಬಿಡುಗಡೆಯಾಗಿರುವುದು 3.75 ಕೋಟಿ ರೂ.
-ಜಾತಿ ಮತ್ತು ಬುಡಕಟ್ಟು ಆಯೋಗಕ್ಕೆ ಹಂಚಿಕೆಯಾಗಿದ್ದು 3.75 ಕೋಟಿ ರೂ. ಬಿಡುಗಡೆಯಾಗಿರುವುದು 3.75 ಕೋಟಿ ರೂ.
- ಭೋವಿ ಅಭಿವೃದ್ಧಿ ನಿಗಮಕ್ಕೆ ಹಂಚಿಕೆಯಾಗಿದ್ದು, 55 ಕೋಟಿ ರೂ. ಬಿಡುಗಡೆಯಾಗಿರುವುದು ಕೇವಲ 13.75 ಕೋಟಿ ರೂ.
-ಆದಿ ಜಾಂಭವ ಅಭಿವೃದ್ಧಿ ನಿಗಮಕ್ಕೆ ಹಂಚಿಕೆಯಾಗಿದ್ದು, 50 ಕೋಟಿ ರೂ. ಬಿಡುಗಡೆಯಾಗಿರುವುದು ಕೇವಲ 12.5 ಕೋಟಿ ರೂ..