ನವದೆಹಲಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಜೋಕ್ ಮಾಡಿದ ಹಿನ್ನೆಲೆಯಲ್ಲಿ ಹಾಸ್ಯ ಕಲಾವಿದ, ಬಿಗ್ ಬಾಸ್ ಸೀಸನ್ 17ರ ವಿನ್ನರ್ ಮುನಾವರ್ ಫಾರೂಕಿ (Munawar Faruqui) ವಿರುದ್ಧ ಕೇಸ್ ದಾಖಲಿಸಲಾಗಿದೆ. ಜಿಯೋ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗುವ “ಹಫ್ತಾ ವಸೂಲಿ” ಕಾರ್ಯಕ್ರಮದಲ್ಲಿ ಧರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಜತೆಗೆ ಅಶ್ಲೀಲತೆಗೆ ಉತ್ತೇಜನ ನೀಡಿದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ವಕೀಲೆ ಅಮಿತಾ ಸಚ್ ದೇವ ಅವರು ಮುನಾವರ್ ಫಾರೂಕಿ ವಿರುದ್ಧ ಕೇಸ್ ದಾಖಲಿಸಿದ್ದು, ಈ ಕುರಿತು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. “ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆ ನೀಡಿದ್ದಾರೆ. ಅಲ್ಲದೆ, ದೇಶದ ಯುವ ಮನಸ್ಸುಗಳಲ್ಲಿ ಕಲ್ಮಶ ಬಿತ್ತುವ ರೀತಿ ಮಾತನಾಡಿದ್ದಾರೆ. ಹಾಗಾಗಿ, ಮುನಾವರ್ ಫಾರೂಕಿ ವಿರುದ್ಧ ಬಿಎನ್ ಎಸ್ ಸೆಕ್ಷನ್ 196, 299 ಹಾಗೂ 353 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಹಿಂದೂ ಜಾಗರಣ ಸಮಿತಿ ಕೂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿದೆ. “ಹಫ್ತಾ ವಸೂಲಿ ಕಾರ್ಯಕ್ರಮವನ್ನು ಕೂಡಲೇ ನಿಷೇಧಿಸಬೇಕು. ಅಶ್ಲೀಲ ಭಾಷೆ ಬಳಸಿದ ಮುನಾವರ್ ಫಾರೂಕಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸಮಾಜದ ದೃಷ್ಟಿಯಿಂದ ಇಂತಹ ಹೇಳಿಕೆಗಳು ಸಮಂಜಸ ಅಲ್ಲ. ನೈತಿಕ ಮೌಲ್ಯಗಳನ್ನು ಅಧಃಪತನದತ್ತ ಕೊಂಡೊಯ್ಯುವ ಇಂತಹ ಶೋಗಳನ್ನು ನಿಷೇಧಿಸಬೇಕು” ಎಂದು ಪೋಸ್ಟ್ ಮಾಡಿದೆ.
ಇತ್ತೀಚೆಗೆ ಕಾಮಿಡಿ ಶೋಗಳಲ್ಲಿ ಕಲಾವಿದರು ಬಳಸುವ ಪದಗಳು, ನೀಡುವ ಹೇಳಿಕೆಗಳು, ಕೀಳುಮಟ್ಟದ ಜೋಕ್ ಗಳ ವಿರುದ್ಧ ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ “ಪೋಷಕರ ಲೈಂಗಿಕತೆ” ಕುರಿತು ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಮಾಡಿದ ಜೋಕ್ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಯೂಟ್ಯೂಬರ್ ಗೆ ಈಗಾಗಲೇ ಸೈಬರ್ ಇಲಾಖೆಯು ನೋಟಿಸ್ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಕ್ಷಮೆಯಾಚಿಸಿದ್ದಾರೆ.