ಬೆಂಗಳೂರು: ವಿವಾಹಿತ ಮಹಿಳೆಗೆ ಯುವಕನೊಬ್ಬ ಕರೆ ಮಾಡಿ ಕಿರುಕುಳ ನೀಡುತ್ತಿರುವುದಕ್ಕೆ ಮನನೊಂದು ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪವೊಂದು ಕೇಳಿ ಬಂದಿದೆ.
ಈ ಘಟನೆ ನಗರದ ಚಾಮರಾಜಪೇಟೆಯಲ್ಲಿ ನಡೆದಿದೆ. ನಂದಿನಿ(32) ಸಾವನ್ನಪ್ಪಿರುವ ಮಹಿಳೆ ಎನ್ನಲಾಗಿದೆ. ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಫೆ.23 ರಂದು ರಾತ್ರಿ 9.30 ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ನಂದಿನಿ ನೇಣು ಬಿಗಿದುಕೊಂಡಿರುವ ಶಂಕೆ ವ್ಯಕ್ತವಾಗಿದೆ. ನಂತರ ಮನೆಗೆ ಬಂದ ಕುಟುಂಬಸ್ಥರು ಮೃತದೇಹ ಕಂಡು ಕೆಳಗೆ ಇಳಿಸಿದ್ದಾರೆ.
ಪೊಲೀಸರು ಬರುವುದಕ್ಕೂ ಮುನ್ನವೇ ಕುಟುಂಬಸ್ಥರು ಮೃತದೇಹ ಕೆಳಗೆ ಇಳಿಸಿದ್ದಾರೆ. ನಂದಿನಿ ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. 8 ವರ್ಷದ ಹಿಂದೆ ಸೂರ್ಯ ಎಂಬಾತನ ಜೊತಗೆ ವಿವಾಹವಾಗಿದ್ದರು. ಈ ದಂಪತಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿದೆ. ವ್ಯಕ್ತಿಯೊಬ್ಬ ನಂದಿನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ವಿಷಯವಾಗಿ ಪತಿ ಹಾಗೂ ಪತ್ನಿಯ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಇದರಿಂದಾಗಿ ಮನನೊಂದು ನಂದಿನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.