ತುಮಕೂರು: ಕೊರಟಗೆರೆ ಪಟ್ಟಣದ ರಸ್ತೆ ಮಧ್ಯೆ ನಿರ್ಮಿಸಿದ್ದ ಕನ್ನಡ ಧ್ವಜಸ್ತಂಭವನ್ನು ತಡರಾತ್ರಿ ತೆರವು ಮಾಡಲಾಗಿದೆ.
ಪೊಲೀಸ್ ಭದ್ರತೆಯಲ್ಲಿ ಕೊರಟಗೆರೆ ತಹಸೀಲ್ದಾರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಕೊರಟಗೆರೆ ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಕನ್ನಡಪರ ಸಂಘಟನೆಗಳಿಂದ ಧ್ವಜಸ್ತಂಭ ನಿರ್ಮಿಸಲಾಗಿತ್ತು.
ಅಲ್ಲದೇ ಆ ಧ್ವಜಸ್ತಂಭದ ಸುತ್ತ ಚೌಕಕಾರವಾಗಿ ಬೃಹತ್ ಕಟ್ಟೆ ನಿರ್ಮಿಸಲಾಗಿತ್ತು. ಇದರಿಂದ ಸಾರ್ವಜನಿಕರ ವಾಹನಗಳ ಓಡಾಟಕ್ಕೆ ಸಾಕಷ್ಟು ತೊಂದರೆಯಾಗಿತ್ತು. ಅಲ್ಲದೇ ಅದೇ ಜಾಗದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿದ್ದವು. ಹೀಗಾಗಿ ಧ್ವಜಸ್ತಂಭ ತೆರವುಗೊಳಿಸುವಂತೆ ಸಾರ್ವಜನಿಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ಅಧಿಕಾರಿಗಳು ಧ್ವಜಸ್ತಂಭ ತೆರವುಗೊಳಿಸಿದ್ದಾರೆ.
ಕಂದಾಯ, ಪೊಲೀಸ್, ಪಿಡ್ಲ್ಯೂಡಿ, ಬೆಸ್ಕಾಂ ಇಲಾಖೆಗಳ ಹಾಗೂ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ಜಂಟಿ ಕಾರ್ಯ ಚರಣೆಯಲ್ಲಿ ತೆರವುಗೊಳಿಸಲಾಗಿದೆ. ತಡರಾತ್ರಿ 1 ಗಂಟೆಗೆ ಕಾರ್ಯಾಚರಣೆ ಆರಂಭವಾಗಿ ಬೆಳಗ್ಗೆ 8ಕ್ಕೆ ಅಂತ್ಯವಾಗಿದೆ. ಆ ಧ್ವಜಸ್ತಂಭ ತೆರವುಗೊಳಿಸಿ ಅಧಿಕಾರಿಗಳು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.