ಕೊಪ್ಪಳ: ಇಲ್ಲಿನ (Koppal) ತೋಟಗಾರಿಕೆ ಇಲಾಖೆ ಆವರಣದಲ್ಲಿ 5 ದಿನ ನಡೆಯಲಿರುವ ವಿವಿಧ ಹಣ್ಣು, ಜೇನು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಿತು. ಬಗೆ ಬಗೆಯ ಹಾಗೂ ಅಪರೂಪದ ತಳಿಯ ಹಣ್ಣು, ಜೇನುಗಳನ್ನು ಇಲ್ಲಿ ಪ್ರದರ್ಶಿಸಲಾಯಿತು.
ಈ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ (Shivaraj Tangadagi) ಚಾಲನೆ ನೀಡಿದರು. ಮೇಳದಲ್ಲಿ 8 ಲಕ್ಷ ರೂ. ಬೆಲೆಯ ಜಪಾನ್‌ನ ರೂಬಿ ರೋಮನ್ ಎಂಬ ತಳಿಯ ದ್ರಾಕ್ಷಿ (Ruby Roman Grape) ಜನರ ಗಮನ ಸೆಳೆಯಿತು. ಈ ಮೇಳ ಫೆ. 27ರ ವರೆಗೆ ನಡೆಯಲಿದೆ.
ಶಿವರಾತ್ರಿ ಹಿನ್ನೆಲೆ ಆಯೋಜಿಸಿರುವ ಮೇಳದಲ್ಲಿ ದ್ರಾಕ್ಷಿ, ದಾಳಿಂಬೆ, ಪೇರಲೆ, ಅಂಜೂರ, ಕಲ್ಲಂಗಡಿ, ಬಾಳೆ, ಪಪ್ಪಾಯ, ಹಲಸು, ಅಣಬೆ ಹಾಗೂ ಜೇನು ಪ್ರದರ್ಶನ ಹಾಗೂ ಮಾರಾಟ ನಡೆಯಿತು. ಸುಮಾರು 30ಕ್ಕೂ ಹೆಚ್ಚು ತೋಟಗಾರಿಕೆ ರೈತರು, 15ಕ್ಕೂ ಹೆಚ್ಚು ಎಫ್ ಪಿಒ, ಹಾಪ್ಕಾಮ್ಸ್ ಸ್ಟಾಲ್ ಹಾಕಿ, ಹಣ್ಣು ಹಾಗೂ ಹಣ್ಣಿನ ಉತ್ಪನ್ನಗಳನ್ನು ಮಾರಾಟ ಮಾಡಲಾಯಿತು.
ಮೇಳದಲ್ಲಿ ಒಂದು ಕೆಜಿಗೆ 8 ಲಕ್ಷ ರೂ. ಬೆಲೆಯ ಜಪಾನ್‌ನ ರೂಬಿ ರೋಮನ್ ಎಂಬ ತಳಿಯ ದ್ರಾಕ್ಷಿ ಪ್ರದರ್ಶನಕ್ಕೆ ಇಡಲಾಗಿತ್ತು. ಜೊತೆಗೆ ಅವಕಾಡೋಫ್ಲಮ್, ಪೀಚ್, ಲಿಚ್ಚಿ, ರೆಡ್ಗ್ಲೋಬ್, ಕಿವಿ ಫ್ರೂಟ್, ರಾಮಭೂತಾನ, ಮ್ಯಾಂಗೋಸ್ಟೀನ್, ಜಪಾನ್ ಮ್ಯಾಂಗೋ, ಐಸ್ಗಾವಾ, ಅಮೇರಿಕನ್ ಆಪಲ್, ಗ್ರೀನ್ ಆಪಲ್, ವಿದೇಶಿ ಪ್ಯಾಷನ್ ಪ್ರೂಟ್, ವೈನ್ಗ್ರೇಪ್ ಸೇರಿದಂತೆ ವಿವಿಧ ರೀತಿಯ ತಳಿಗಳ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.