ಹಾವೇರಿ: ಜಾತ್ರೆಗೆ ಹೋಗುತ್ತೇನೆಂದು ಹೇಳಿ ಹೋಗಿದ್ದ ಮಹಿಳೆ ಶವವಾಗಿ ಪತ್ತೆಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡ ಗ್ರಾಮದ ಮಹಿಳೆ ಈ ರೀತಿ ಸಾವನ್ನಪ್ಪಿದವರು. ಪಕ್ಕಿರವ್ವ ನಿಂಗಪ್ಪ ಸಣ್ಣತಮ್ಮಣ್ಣನವರ ಸಾವನ್ನಪ್ಪಿರುವ ಮಹಿಳೆ. ಈ ಮಹಿಳೆಯು ದಾರಿ ಮಧ್ಯೆ ನಿರ್ಮಾಣ ಹಂತದ ಕಟ್ಟಡದಲ್ಲಿ ಅರೆ ಬೆತ್ತಲಾಗಿ ಬಿದ್ದಿದ್ದರು. ಇದನ್ನು ಗಮನಿಸಿದ ಪೂಜಾರಿಯೊಬ್ಬರು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ಹಲ್ಲೆಗೊಳಗಾದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಎಂಟು ದಿನದ ನಂತರ ಸಾವನಪ್ಪಿದ್ದಾರೆ. ಇದು ರೇಪ್ ಮತ್ತು ಮರ್ಡರ್ ಕೇಸ್ ಅಂತಾ ಸಂಬಂಧಿಕರು ಆರೋಪಿಸಿದ್ದಾರೆ.
ಈ ಮಹಿಳೆ ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಒಬ್ಬಂಟಿಯಾಗಿ ಬದುಕು ಸಾಗಿಸುತ್ತಿದ್ದರು. ಆದರೆ, ಫೆ. 15ರಂದು ಕೋಡ್ ಗ್ರಾಮದಿಂದ ಜಾತ್ರೆಗೆ ಹೋಗುತ್ತೇನೆಂದು ಹೋಗಿದ್ದ ಮಹಿಳೆ, ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜಿಲ್ಲೆಯ ಹಿರೇಕೆರೂರು ಪಟ್ಟಣದ ಹೊರವಲಯದಲ್ಲಿರುವ ದುರ್ಗಾದೇವಿ ದೇವಾಲಯದ ಬಳಿ ಮಹಿಳೆ ಮೇಲೆ ಅತ್ಯಾಚಾರ ಆಗಿರಬಹುದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸಾವನ್ನಪ್ಪಿರುವ ಮಹಿಳೆ ಕಾಣೆಯಾಗಿದ್ದಕ್ಕೆ ಮೃತಳ ಮಾವ ಅವರನ್ನು ಹುಡುಕಾಡಿ ನಂತರ ದೂರು ದಾಖಲಿಸಿದ್ದರು. ಆನಂತರ ಈ ಪ್ರಕರಣ ಬೆಳಕಿಗೆ ಬಂದಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೋಡ ಗ್ರಾಮದ ಗದಿಗೆಪ್ಪ ಪಾಟೀಲ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈತ ಮಹಿಳೆಯೊಂದಿಗೆ ಸಲುಗೆಯಿಂದ ಇದ್ದ ಎನ್ನಲಾಗಿದೆ.