ದುಬೈ: ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ ಕಾರಣಕ್ಕೆ ಭಾರತ ತಂಡದ ಅದ್ಭುತ ಫೀಲ್ಡರ್ ಆಗಿ ಹೊರಹೊಮ್ಮುತ್ತಿರುತ್ತಾರೆ. ಅದ್ಭುತ ಕ್ಯಾಚ್ಗಳನ್ನು ಪಡೆಯುವುದು, ಫೀಲ್ಡಿಂಗ್ ಮೂಲಕ ರನ್ಗಳಿಗೆ ಕಡಿವಾಣ ಹಾಕುವುದು ಮೈದಾನದಲ್ಲಿ ಅವರ ಇಷ್ಟದ ಕೆಲಸ. ಅಂತೆಯೇ ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ನಸೀಮ್ ಶಾ ಅವರ ಕ್ಯಾಚ್ ಪಡೆಯುತ್ತಿದ್ದಂತೆ, ವಿಕೆಟ್ ಕೀಪರ್ ಹೊರತುಪಡಿಸಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಕ್ಯಾಚ್ ಪಡೆದ ಮೊದಲ ಭಾರತೀಯ ಹಾಗೂ ವಿಶ್ವದ ಮೂರನೇ ಫೀಲ್ಡರ್ ಎಂಬ ದಾಖಲೆ ಬರೆದಿದ್ದಾರೆ.
ವಿರಾಟ್ ಕೊಹ್ಲಿ ಸಾಧನೆ ಮಾಡುವ ವೇಳೆ ಮಾಜಿ ನಾಯಕ ಹಾಗೂ ಆಟಗಾರ ಮೊಹಮ್ಮದ್ ಅಜರುದ್ದೀನ್(156) ದಾಖಲೆಯನ್ನು ಉಡೀಸ್ ಮಾಡಿದ್ದಾರೆ. ಹಲವಾರು ವರ್ಷಗಳ ವರೆಗೆ ಮೊಹಮ್ಮದ್ ಅಜರುದ್ದೀನ್ ಅವರು ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿಇಟ್ಟುಕೊಂಡಿದ್ದರು. ಆದರೆ, ಈಗ ಕೊಹ್ಲಿ ಕ್ಯಾಚ್ ಹಿಡಿಯುವುದರಲ್ಲೂ ನಾನೇ ಕಿಂಗ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಮೂರು ಕ್ಯಾಚ್ ಹಿಡಿದಿದ್ದ ವಿರಾಟ್ ಕೊಹ್ಲಿ, ಅಜರುದ್ದೀನ್ ದಾಖಲೆ ಸರಿಗಟ್ಟಿದ್ದರು. ಇದೀಗ ಪಾಕ್ ವಿರುದ್ಧ ಒಟ್ಟು 2 ಕ್ಯಾಚ್ ಪಡೆದು ಅಜರುದ್ದೀನ್ ಅವರನ್ನು ಹಿಂದಿಕ್ಕಿದ್ದಾರೆ. ಸದ್ಯ ಕೊಹ್ಲಿ 158* ಕ್ಯಾಚ್ ಹಿಡಿದಿದ್ದಾರೆ. ವಿಶ್ವ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ ಹೆಸರಿನಲ್ಲಿದೆ. ಅವರು 218 ಕ್ಯಾಚ್ ಹಿಡಿದಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಆಸೀಸ್‌ನ ರಿಕಿ ಪಾಂಟಿಂಗ್(160) ಕಾಣಿಸಿಕೊಂಡಿದ್ದಾರೆ. ಪಾಂಟಿಂಗ್ ದಾಖಲೆ ಮುರಿಯಲು ಕೊಹ್ಲಿಗೆ ಮೂರು ಕ್ಯಾಚ್‌ಗಳ ಅಗತ್ಯವಿದೆ.
ಏಕದಿನದಲ್ಲಿ ಅತ್ಯಧಿಕ ಕ್ಯಾಚ್ ಹಿಡಿದವರು
ಮಹೇಲಾ ಜಯವರ್ಧನೆ-448 ಪಂದ್ಯ, 218 ಕ್ಯಾಚ್
ರಿಕಿ ಪಾಂಟಿಂಗ್- 375 ಪಂದ್ಯ, 160 ಕ್ಯಾಚ್
ವಿರಾಟ್ ಕೊಹ್ಲಿ- 299 ಪಂದ್ಯ, 158* ಕ್ಯಾಚ್
ಮೊಹಮ್ಮದ್ ಅಜರುದ್ದೀನ್- 334 ಪಂದ್ಯ, 156 ಕ್ಯಾಚ್
ರಾಸ್ ಟೇಲರ್- 236 ಪಂದ್ಯ,142 ಕ್ಯಾಚ್