ಹಾಸನ: ತೋಟದ ಮನೆಗೆ ಬೆಂಕಿ ತಗುಲಿದ ಪರಿಣಾಮ ಐದು ಹಸು, ಕರು, ಕೊಬ್ಬರಿ, ತೆಂಗಿನಕಾಯಿ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹೆಂಜಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೆಂಕಿ ತಗುಲಿದ ಪರಿಣಾಮ ಐದು ಹಸು, ಒಂದು ಕರು, ಹದಿನೈದು ಸಾವಿರ ಕೊಬ್ಬರಿ, ಹತ್ತು ಸಾವಿರ ತೆಂಗಿನಕಾಯಿ ಸಂಪೂರ್ಣ ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ. ಗ್ರಾಮದ ಶಿವಣ್ಣ ಎಂಬುವವರಿಗೆ ಸೇರಿದ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ.
ತೋಟದ ಮನೆಯಲ್ಲಿ ದಾಸ್ತಾನು ಮಾಡಿದ್ದ ಸಾವಿರಾರು ಕೊಬ್ಬರಿ ಹಾಗೂ ತೆಂಗಿನಕಾಯಿಗಳಿಗೆ ಬೆಂಕಿ ಹೊತ್ತಿ ಇಡೀ ಕೊಟ್ಟಿಗೆಗೆ ಆವರಿಸಿದೆ ಎನ್ನಲಾಗಿದೆ. ಶನಿವಾರ ರಾತ್ರಿ ಹಾಲು ಕರೆದು ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿ ಜಾಜೂರಿನ ವಾಸದ ಮನೆಗೆ ಶಿವಣ್ಣ ಬಂದಿದ್ದರು. ಆದರೆ, ಆ ವೇಳೆ ಈ ದುರ್ಘಟನೆ ಸಂಭವಿಸಿದೆ. ಆದರೆ, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸುದ್ದಿ ತಿಳಿಯುತ್ತಿದ್ದಂತೆ ಅಧಿಕಾರಿಗಳೊಂದಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರೈತನಿಗೆ ಸಾಂತ್ವನ ಹೇಳಿದ್ದಾರೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.