ಕಡಲೂರು: ಕೇಂದ್ರ ಸರ್ಕಾರ 10 ಸಾವಿರ ಕೋಟಿ ಕೊಟ್ಟರೂ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಒಪ್ಪುವುದಿಲ್ಲ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ಕೇವಲ ಹಿಂದಿ ಹೇರಿಕೆ ಪ್ರಯತ್ನದಿಂದ ಮಾತ್ರ NEPಗೆ ವಿರೋಧಿಸುತ್ತಿಲ್ಲ. ವೈದ್ಯಕೀಯ ಕೋರ್ಸ್‌ಗಳಿಗೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET)ಯಂತೆಯೇ ಕಲಾ ಮತ್ತು ವಿಜ್ಞಾನ ಕಾಲೇಜುಗಳ ಪ್ರವೇಶಕ್ಕೂ ಸ್ಕ್ರೀನಿಂಗ್ ಪರೀಕ್ಷೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ, NEP ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಸ್ಥಗಿತಗೊಳಿಸಲು ಅವಕಾಶ ನೀಡುತ್ತದೆ. ವಿದ್ಯಾರ್ಥಿಗಳ ಭವಿಷ್ಯ ಮತ್ತು ಸಾಮಾಜಿಕ ನ್ಯಾಯ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವ ಹಲವಾರು ಇತರ ಅಂಶಗಳಿಂದಲೂ ಈ ನೀತಿಗೆ ನಮ್ಮ ವಿರೋಧವಿದೆ ಎಂದು ಹೇಳಿದ್ದಾರೆ.
“ರಾಜ್ಯವು NEP ಜಾರಿಗೆ ತಂದರೆ ತಮಿಳುನಾಡಿಗೆ 2 ಸಾವಿರ ಕೋಟಿ ರೂ. ಸಿಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಕೇಂದ್ರವು 10,000 ಕೋಟಿ ರೂ.ಗಳನ್ನು ನೀಡಿದರೂ ನಾವು NEPಗೆ ಒಪ್ಪುವುದಿಲ್ಲ. ನಾನು NEP ಗೆ ಅವಕಾಶ ನೀಡುವುದಿಲ್ಲ ಮತ್ತು ತಮಿಳುನಾಡನ್ನು 2,000 ವರ್ಷಗಳ ಕಾಲ ಹಿಂದಕ್ಕೆ ತಳ್ಳುವ ಪಾಪವನ್ನು ನಾನು ಮಾಡುವುದಿಲ್ಲ ಎಂದು ಹೇಳಿದ್ದಾರೆ.