ರಾಷ್ಟ್ರೀಯ ಪಂಚಾಯತ್ ಪುರಸ್ಕಾರ 2024ರಡಿ ಉಡುಜಿ ಜಿಲ್ಲಾ ಪಂಚಾಯತಿ ಗಳಿಸಿದ ನಾನಾಜೀ ದೇಶಮುಖ ಸರ್ವೋತ್ತಮ್ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರಕ್ಕೆ ಸಂದ ನಗದು ಬಹುಮಾನವನ್ನು ಸಂಬಂಧಿಸಿದ ಗ್ರಾಮ ಪಂಚಾಯತಿಗಳಿಗೆ ಮರು ಹಂಚಿಕೆ ಮಾಡಲಾಗಿದೆ.

ಈ ಪ್ರಶಸ್ತಿ ಮೊತ್ತವನ್ನು ಜಿಲ್ಲೆಯ ಗ್ರಾಪಂಗಳಿಗೆ ಪ್ರಶಸ್ತಿ ರೂಪದಲ್ಲೇ ನೀಡಲಾಗಿದೆ. ಪಂಚಾಯತ್ ರಾಜ್ ಮಂತ್ರಾಲಯವು ರಾಷ್ಟ್ರೀಯ ಪಂಚಾಯತ್ ಪುರಸ್ಕಾರಗಳನ್ನು ನೀಡುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತಿಗಳನ್ನು ಪ್ರೋತ್ಸಾಹಿಸುತ್ತಿದೆ. ಹೀಗಾಗಿ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಿದ ಗ್ರಾಪಂಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ.

9 ವಿಭಾಗಗಳಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಗ್ರಾಪಂಗಳ ಸರ್ವೋತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪಂಚಾಯತ್ ರಾಷ್ಟ್ರ ಮಟ್ಟದಲ್ಲಿ ನಾನಾಜೀ ದೇಶಮುಖ್ ಸರ್ವೋತ್ತಮ್ ಪಂಚಾಯತ್ ಸತತ್ ವಿಕಾಸ ಪುರಸ್ಕಾರದಡಿ ತೃತೀಯ ಸ್ಥಾನಗಳಿಸಿದೆ. ಹೀಗಾಗಿ ಉಡುಪಿ ಜಿಪಂಗೆ 2 ಕೋಟಿ ರೂ. ನಗದು ಬಹುಮಾನ ಲಭಿಸಿದೆ. ಈ ಅನುದಾನವನ್ನು ಜಿಲ್ಲೆಯ ಗ್ರಾಪಂಗಳಿಗೆ ವಿವಿಧ ವಿಭಾಗಗಳ ಸಾಧನೆ ಗುರುತಿಸಿ ನೀಡಲಾಗಿದೆ. ಪ್ರತಿಯೊಂದು ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ಗ್ರಾಪಂಗೆ 10 ಲಕ್ಷ ರೂ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ಗ್ರಾಪಂಗಳಿಗೆ ಕ್ರಮವಾಗಿ 7 ಲಕ್ಷ ರೂ. ಹಾಗೂ 5 ಲಕ್ಷ ರೂ. ನೀಡಲಾಗಿದೆ.

ಜಿಲ್ಲೆಯ ನಾವುಂದ ಗ್ರಾಪಂ ಮಕ್ಕಳ ಸ್ನೇಹಿ ಪಂಚಾಯತ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, 10 ಲಕ್ಷ ರೂ. ಪ್ರಶಸ್ತಿ ಗಳಿಸಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ವಿತರಿಸಲಾಯಿತು.
ಈ ವೇಳೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ರಹೀಂ ಖಾನ್, ಪಿಎಂ ನರೇಂದ್ರ ಸ್ವಾಮಿ, ವಿಪ ಸದಸ್ಯರಾದ ಮಂಜುನಾಥ ಭಂಡಾರಿ, ಕಿಶೋರ್ ಕುಮಾರ್ ಬ್ಯಾಟಾಡಿ, ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿಲ್ಲಾ ಸಿಇಒ ಪ್ರತೀಕ್ ಬಾಯಲ್, ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ, ಪಿಡಿಒ ಗಣೇಶ್ ಎಂ ಹಾಗೂ ಪಂಚಾಯತ್ ಪಧಾಧಿಕಾರಿಗಳು, ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.