ದೆಹಲಿ: ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಬಿಜೆಪಿ ಶಾಸಕರಾದ ಅರವಿಂದರ್ ಸಿಂಗ್ ಲವ್ಲಿಯನ್ನು ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿದ್ದಾರೆ. ಫೆಬ್ರುವರಿ 24 ರಂದು ದೆಹಲಿಯ ನೂತನ ಸರ್ಕಾರದ ಮೊದಲ ಅಧಿವೇಶನ ನಡೆಯಲಿದ್ದು, ಬೆಳಿಗ್ಗೆ 11ಕ್ಕೆ ಹೊಸದಾಗಿ ಚುನಾಯಿತರಾದ ಶಾಸಕರು ಪ್ರಮಾಣ ವಚನ ಸ್ವೀಕರಿಸುವರು. ನಂತರ ಮಧ್ಯಾಹ್ನ 2ಕ್ಕೆ ಸ್ಪೀಕರ್ ಆಯ್ಕೆ ನಡೆಯಲಿದೆ ಎಂದು ಮೂಲಗಳು ತಿಳಿಸುತ್ತಿವೆ.
ಫೆಬ್ರುವರಿ 25 ರಂದು, ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ವಿಧಾನಸಭೆಯನ್ನು ಉದ್ದೇಶಿಸಿ ಭಾಷಣ ನೀಡುವರು. ನಂತರ ಮಹಾಲೇಖಪಾಲರ ವರದಿಗಳನ್ನು (ಸಿಎಜಿ) ಮಂಡಿಸಲಾಗುತ್ತದೆ. ಫೆಬ್ರುವರಿ 26 ರಂದು, ಗವರ್ನರ್ ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ನಡೆಯಲಿದೆ ಮತ್ತು ನಂತರ ದೆಹಲಿ ವಿಧಾನಸಭೆಯ ಉಪಸಭಾಪತಿ ನೇಮಕ ಮಾಡಲಾಗುತ್ತದೆ.
ದೆಹಲಿಯ ನೂತನ ಮುಖ್ಯಮಂತ್ರಿಯಾಗಿರುವ ರೇಖಾ ಗುಪ್ತಾ ಅವರು ಗುರುವಾರ ಪ್ರಮಾಣ ವಚನವನ್ನು ಸ್ವೀಕರಿಸಿದ್ದರು. ಅದೇ ಸಂದರ್ಭದಲ್ಲಿ ಆರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಮೊದಲ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರೇಖಾ ಗುಪ್ತಾ ಹೇಳಿದ್ದಾರೆ: “ಜನರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಡಿಯಲ್ಲಿ ₹5 ಲಕ್ಷ ವೆಚ್ಚದವರೆಗೆ ಉಚಿತ ಚಿಕಿತ್ಸೆಯನ್ನು ಒದಗಿಸಲಾಗುವುದು ಮತ್ತು ಉಳಿದ 14 ಸಿಎಜಿ ವರದಿಗಳನ್ನು ಈ ಅಧಿವೇಶನದಲ್ಲಿ ಮಂಡಿಸಲಾಗುವುದು.”
70 ಸದಸ್ಯರ ದೆಹಲಿ ವಿಧಾನಸಭೆಗೆ ಫೆಬ್ರುವರಿ 5 ರಂದು ನಡೆದ ಚುನಾವಣೆಯಲ್ಲಿ 48 ಕ್ಷೇತ್ರಗಳನ್ನು ಗೆದ್ದು, 26 ವರ್ಷಗಳ ಬಳಿಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಎಎಪಿ 22 ಕ್ಷೇತ್ರಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಮೂರನೇ ಬಾರಿ ಖಾತೆ ತೆರೆಯುವಲ್ಲಿ ವಿಫಲವಾಗಿದೆ.