ಪ್ರಯಾಗರಾಜ್: ತಿಳಿದೋ, ತಿಳಿಯದೆಯೋ ಮಾಡಿದ ಪಾಪ ಕಾರ್ಯಗಳಿಂದ ಮುಕ್ತಿ ಹೊಂದಿ, ಸನ್ಮಾರ್ಗದಲ್ಲಿ ನಡೆಯಲು ಪ್ರಯಾಗರಾಜ್ ಕುಂಭಮೇಳಕ್ಕೆ (Maha Kumbh 2025) ತೆರಳುತ್ತಾರೆ. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು, ಒಳ್ಳೆಯ ಜೀವನ ಸಾಗಿಸುವ ಶಪಥ ಮಾಡುತ್ತಾರೆ. ಆದರೆ, ಜಾರ್ಖಂಡ್ ನಲ್ಲೊಬ್ಬ ಪಾಪಿಯು, ಅನಾರೋಗ್ಯ ಪೀಡಿತ ತಾಯಿಯನ್ನು ಮನೆಯಲ್ಲೇ ಕೂಡಿಹಾಕಿ ಮಹಾ ಕುಂಭಮೇಳಕ್ಕೆ ತೆರಳಿದ್ದಾನೆ.
ಹೌದು, ಜಾರ್ಖಂಡ್ ನ ರಾಮಗಢ ಜಿಲ್ಲೆಯ ವ್ಯಕ್ತಿಯು ಇಂತಹ ಕೃತ್ಯ ಎಸಗಿದ್ದಾನೆ. ತಾಯಿಗೆ ಹುಷಾರಿಲ್ಲ ಎಂಬುದನ್ನೂ ಗಮನಿಸದೆ, ಪಕ್ಕದ ಮನೆಯವರಿಗೂ ತಿಳಿಸದೆ, ಕೋಣೆಯಲ್ಲಿ ಕೂಡಿಹಾಕಿ ಪತ್ನಿ, ಮಕ್ಕಳು ಹಾಗೂ ಸಂಬಂಧಿಕರೊಂದಿಗೆ ಕುಂಭಮೇಳಕ್ಕೆ ತೆರಳಿದ್ದಾನೆ. ಅನಾರೋಗ್ಯದಿಂದ ನರಳುತ್ತಿದ್ದ 65 ವರ್ಷದ ಮಹಿಳೆಯು ಮನೆಯಲ್ಲೇ ನರಕ ಅನುಭವಿಸಿದ್ದಾರೆ. ಇದಾದ ಬಳಿಕ ಆಕೆಯನ್ನು ರಕ್ಷಿಸಲಾಗಿದೆ. ಮಹಿಳೆಯನ್ನು ಸಂಜು ದೇವಿ ಎಂದು, ಪಾಪಿ ಪುತ್ರನನ್ನು ಅಖಿಲೇಶ್ ಕುಮಾರ್ ಎಂದು ಗುರುತಿಸಲಾಗಿದೆ.
ಪೊಲೀಸರಿಂದ ರಕ್ಷಣೆ
ಕಳೆದ ಫೆಬ್ರವರಿ 17ರಿಂದಲೂ ಮಹಿಳೆಯು ಕೋಣೆಯಲ್ಲೇ ಕಾಲ ಕಳೆದಿದ್ದಾರೆ. ಅನಾರೋಗ್ಯವಿದ್ದರೂ ನುಚ್ಚಕ್ಕಿ ಅನ್ನ ತಿಂದು ಕಾಲ ಕಳೆದಿದ್ದಾರೆ. ಅಕ್ಕ-ಪಕ್ಕದ ಮನೆಯವರಿಂದ ಮಾಹಿತಿ ಪಡೆದ ಪೊಲೀಸರು, ಕೂಡಲೇ ಮನೆಗೆ ಆಗಮಿಸಿ, ಬೀಗ ಒಡೆದು, ಮಹಿಳೆಯನ್ನು ರಕ್ಷಿಸಿದ್ದಾರೆ. ಮನೆಯಲ್ಲಿದ್ದ ನುಚ್ಚಕ್ಕಿ ಖಾಲಿಯಾದ ಕಾರಣ ಮಹಿಳೆಗೆ ಅಡುಗೆ ಮಾಡಿಕೊಳ್ಳಲು ಆಗಿಲ್ಲ. ಆರೋಗ್ಯ ಇನ್ನಷ್ಟು ಹದಗೆಟ್ಟ ಕಾರಣ ಏನೂ ಮಾಡಿಕೊಳ್ಳಲು ಆಗಿಲ್ಲ ಎಂದು ತಿಳಿದುಬಂದಿದೆ.
ಮಹಿಳೆಯು ಹಸಿವಿನಿಂದ ಬಳಲಿದ್ದಾರೆ. ಊಟ ಊಟ ಎಂದು ಜೋರಾಗಿ ಕೂಗಿದ್ದಾರೆ. ಕೊನೆಗೆ ಮಹಿಳೆಯ ಧ್ವನಿ ಕೇಳಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ, ಮಹಿಳೆಯನ್ನು ರಕ್ಷಿಸಿದ್ದಾರೆ. ಆಕೆಗೆ ಊಟ, ಜ್ಯೂಸ್ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪೊಲೀಸರು ಅಖಿಲೇಶ್ ಕುಮಾರ್ ಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎನ್ನಲಾಗಿದೆ.