ಬೀಜಿಂಗ್: ಮತ್ತೊಮ್ಮೆ ಜಗತ್ತಿಗೆ ಕೊರೊನಾತಂಕ ಎದುರಾಗಲಿದೆಯೇ? ಕೋವಿಡ್-19 ಸೋಂಕಿನ ಮಾದರಿಯಲ್ಲೇ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವಂಥ ಅಪಾಯ ಹೊಂದಿರುವ ಹೊಸ ಬಾವಲಿ ಕೊರೊನಾವೈರಸ್ ಚೀನಾದಲ್ಲಿ ಪತ್ತೆಯಾಗಿದೆ. ಇದು ಕೋಟಿಗಟ್ಟಲೆ ಜನರನ್ನು ಬಲಿಪಡೆದ ಕೋವಿಡ್ ಭೂತ ಮತ್ತೊಮ್ಮೆ ಜಗತ್ತನ್ನು ಆಕ್ರಮಿಸಲಿದೆಯೇ ಎಂಬ ಆತಂಕವನ್ನು ಸೃಷ್ಟಿಸಿದೆ.
ಕೊರೊನಾ ವೈರಸ್‌ಗಳಿಗೆ ಸಂಬಂಧಿಸಿ ನಿರಂತರ ಅಧ್ಯಯನ ಕೈಗೊಳ್ಳುವ ಮೂಲಕ “ಬ್ಯಾಟ್ ವುಮನ್” ಎಂಬ ಖ್ಯಾತಿಗೆ ಪಾತ್ರರಾಗಿರುವ ಖ್ಯಾತ ವಿಜ್ಞಾನಿ ಶಿ ಜೆಂಗ್ಲಿ ನೇತೃತ್ವದ ವೈರಾಲಜಿಸ್ಟ್‌ಗಳ ತಂಡವೊಂದು ಈಗ “ಎಚ್‌ಕೆಯು 5 -ಕೋವ್-2” ಎಂದು ಕರೆಯಲ್ಪಡುವ ಹೊಸ ವೈರಸ್‌ವೊಂದನ್ನು ಪತ್ತೆಹಚ್ಚಿದೆ. ಚೀನಾದ ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆಯೇ ಈ ಬಗ್ಗೆ ವರದಿ ಮಾಡಿದೆ.
ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಕಾರಣವಾದ ವೈರಸ್ ಸಾರ್ಸ್ ಕೋವ್ -2ಗೆ ಈ ಹೊಸ ವೈರಸ್ ಕೂಡ ಹೋಲುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದು ಕೂಡ ಕೋವಿಡ್ ಸೋಂಕಿನಂತೆಯೇ ಎಸಿಇ 2 ಎಂದು ಕರೆಯಲ್ಪಡುವ ಮಾನವ ಜೀವಕೋಶಗಳ ಒಳಕ್ಕೆ ನುಸುಳಬಹುದು ಎಂದು ಹೇಳಲಾಗಿದೆ.

ಏನಿದು ಎಚ್‌ಕೆಯು 5-ಕೋವ್-2?
ಎಚ್‌ಕೆಯು 5-ಕೋವ್-2 ಎನ್ನುವುದು ಮೆರ್ಬೆಕೊವೈರಸ್ ಉಪಕುಲಕ್ಕೆ ಸೇರಿದ ಕೊರೋನಾವೈರಸ್ ಆಗಿದ್ದು, ಇದು ಕೂಡ ಮಿಡ್ಲ್ ಈಸ್ಟ್ ಉಸಿರಾಟದ ಸಿಂಡ್ರೋಮ್ (ಮೆರ್ಸ್) ಗೆ ಕಾರಣವಾಗುವ ವೈರಸ್ ಅನ್ನು ಒಳಗೊಂಡಿದೆ. ಹೊಸ ವೈರಸ್ ಮಾನವ ಜೀವಕೋಶದೊಳಕ್ಕೆ ಪ್ರವೇಶ ಪಡೆಯಬಲ್ಲದು. ಮತ್ತು ಇದು ಸಾರ್ಸ್-ಕೋವ್-2 ಮತ್ತು ಎನ್ಎಲ್ 63 (ಸಾಮಾನ್ಯ ಶೀತ ವೈರಸ್)ಗೆ ಹೋಲುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಪ್ರಯೋಗಾಲಯದಲ್ಲಿ ವಿಜ್ಞಾನಿಗಳು ಮಾನವ ಅಂಗಗಳ ಪುಟ್ಟ ಮಾದರಿಗಳನ್ನು ಇಟ್ಟು ಈ ವೈರಸ್ ಅನ್ನು ಪರೀಕ್ಷಿಸಿದಾಗ, ಆ ಮಾನವ ಜೀವಕೋಶಗಳಿಗೆ ಸೋಂಕು ತಗುಲಿಸುವಲ್ಲಿ ಎಚ್‌ಕೆಯು 5-ಕೋವ್ -2 ಸಮರ್ಥವಾಗಿದೆ.
ಆದಾಗ್ಯೂ, ವೈರಸ್ ಮಾನವರಿಗೆ ಹರಡುವ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಇನ್ನಷ್ಟು ಪರೀಕ್ಷೆಗಳ ಮೂಲಕ ಕಂಡುಕೊಳ್ಳಬೇಕಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಮತ್ತೊಂದು ಸಾಂಕ್ರಾಮಿಕದ ಭೀತಿಯಿದೆಯೇ?
ಈ ಹೊಸ ವೈರಸ್‌ನಿಂದ ಜಗತ್ತಿಗೆ ಮತ್ತೊಂದು ಸಾಂಕ್ರಾಮಿಕ ರೋಗದ ಭೀತಿ ಉಂಟಾಗಿದೆಯೇ ಎಂಬ ಪ್ರಶ್ನೆಗೆ, ಉತ್ತರಿಸಿದ ಮಿನ್ನೆಸೋಟ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗ ತಜ್ಞ ಡಾ.ಮೈಕೆಲ್ ಓಸ್ಟರ್ಹೋಮ್, “ಚೀನಾದ ವಿಜ್ಞಾನಿಗಳು ನಡೆಸಿರುವು ಈ ಅಧ್ಯಯನಕ್ಕೆ ಅತಿಯಾದ ಪ್ರತಿಕ್ರಿಯೆ ನೀಡಬೇಕಾಗಿಲ್ಲ. ಮಿತಿಮೀರಿದ ಪ್ರತಿಕ್ರಿಯೆ ಅಗತ್ಯವಿಲ್ಲ. 2019ಕ್ಕೆ ಹೋಲಿಸಿದರೆ ಈಗ ಇದೇ ರೀತಿಯ ಸಾಕಷ್ಟು ಸಾರ್ಸ್ ವೈರಸ್‌ಗಳಿಗೆ ಜನರು ಒಗ್ಗಿಕೊಂಡಿದ್ದು, ಇಂಥವುಗಳನ್ನು ಎದುರಿಸಲು ನಮ್ಮಲ್ಲು ಸಾಕಷ್ಟು ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿದೆ. ಹೀಗಾಗಿ ಹೊಸ ವೈರಸ್ ಹಬ್ಬಿದರೂ ಸಾಂಕ್ರಾಮಿಕದ ಅಪಾಯ ಕಡಿಮೆಯಿರುತ್ತದೆ” ಎಂದು ಹೇಳಿದ್ದಾರೆ.