ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜಿಸಲು ಮುಂದಾಗಿರುವ ರಾಜ್ಯ ಸರ್ಕಾರ ಈಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ.
ವಿಭಜನೆಯ ಕಾರ್ಯಕ್ಕೆ ಸಂಬಂಧಿಸಿದಂತೆ ಸಾಧಕ- ಬಾಧಕಗಳ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರ ಸಮಿತಿ ರಚನೆ ಮಾಡಿದೆ. ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಈ ಸಮಿತಿ ರಚಿಸಲಾಗಿದೆ. ಈಗಾಗಲೇ ಶಾಸಕ ಅರ್ಷದ್ ನೇತೃತ್ವದಲ್ಲಿ ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿಯಿಂದ ವರದಿ ಸಿದ್ಧವಾಗಿದೆ. ಸೋಮವಾರ ಸರ್ಕಾರಕ್ಕೆ ಜಂಟಿ ಪರಿಶೀಲನಾ ಸಮಿತಿಯಿಂದ ವರದಿ ಸಲ್ಲಿಕೆ ಮಾಡಲಿದೆ.
ಸೋಮವಾರ ಮಧ್ಯಾಹ್ನ 12ಕ್ಕೆ ವಿಧಾನಸಭೆ ಸ್ವೀಕರ್ ಗೆ ವರದಿ ಸಲ್ಲಿಕೆಯಾಗಲಿದೆ. ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿ ಅಧ್ಯಕ್ಷ ರಿಜ್ವಾನ್ ಅರ್ಷದ್ ರಿಂದ ವರದಿ ಸ್ಪೀಕರ್ ಗೆ ಸಲ್ಲಿಕೆಯಾಗಲಿದೆ.
ಪಾಲಿಕೆಯನ್ನು ಮೂರರಿಂದ 7 ಭಾಗಗಳಾಗಿ ವಿಭಜಿಸಲು ಪರಿಶೀಲನಾ ಸಮಿತಿ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ. ಇದೇ ತಿಂಗಳು 25 ರಂದು ಬಿಬಿಎಂಪಿ ಚುನಾವಣೆ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ಹಿನ್ನೆಲೆಯಲ್ಲಿ ವಿಭಜನೆಯ ಅಸ್ತ್ರ ಪ್ರಯೋಗಿಸಿ ಚುನಾವಣೆ ಮುಂದೂಡಲು ಸರ್ಕಾರ ಈ ರೀತಿಯ ಪ್ಲಾನ್ ಮಾಡಿದೆ ಎನ್ನಲಾಗುತ್ತಿದೆ.
ಈಗಾಗಲೇ ಬಿಬಿಎಂಪಿ ವಿಭಜನೆ ಹಾಗೂ ಗ್ರೇಟರ್ ಬೆಂಗಳೂರು ರಚನೆಗೆ ಬಿ.ಎಸ್. ಪಾಟೀಲ್ ಸಮಿತಿ ಶಿಫಾರಸು ಮಾಡಿತ್ತು. ಬಿ.ಎಸ್. ಪಾಟೀಲ್ ಸಮಿತಿಯು ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿಗೆ ಶಿಫಾರಸು ಮಾಡಿದೆ. ಬಿ.ಎಸ್. ಪಾಟೀಲ್ ಸಮಿತಿಯ ವರದಿ ಪುರಸ್ಕರಿಸಿರುವ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿ ಗ್ರೇಟರ್ ಬೆಂಗಳೂರು ವಿಭಜನೆಗೆ ಮುಂದಾಗಿದೆ ಎನ್ನಲಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಾಲಿಕೆ ವಿಭಜನೆಗೆ ವ್ಯಾಪಕ ವಿರೋಧ ಕೇಳಿ ಬಂದಿತ್ತು. ಆದರೆ, ಈಗ ಕಾಂಗ್ರೆಸ್ ಮತ್ತೆ ಈ ಕೆಲಸಕ್ಕೆ ಕೈ ಹಾಕಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಹೋಳಾಗಲಿದೆಯೇ ಕಾಯ್ದು ನೋಡಬೇಕಿದೆ.