ಕಲಬುರಗಿ: ಸಹೋದರಿಯ ಪ್ರೀತಿಯ ವಿಷಯಕ್ಕೆ ಸಂಬಂಧಿಸಿದಂತೆ ಭೀಕರ ಕೊಲೆಯೊಂದು ನಡೆದಿದ್ದು, ಕೊಲೆ ಮಾಡಿದ ವ್ಯಕ್ತಿ ಕುಂಭಮೇಳಕ್ಕೆ ಪಾಪ ಕಳೆಯಲು ಹೋಗಿದ್ದಾನೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಫೆ. 16ರಿಂದ ಕಾಣೆಯಾಗಿದ್ದ ವ್ಯಕ್ತಿಯ ಶವ ಪತ್ತೆಯಾಗಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ತನಿಖೆಯಿಂದ ಕೆಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಆಳಂದ ತಾಲೂಕಿನ ಖಜೂರಿ ಗ್ರಾಮದ ರಾಹುಲ್ ಎಂಬಾತನೇ ಕೊಲೆಯಾಗಿರುವ ದುರ್ದೈವಿ. ಜೀಪ್ ಚಾಲಕನಾಗಿದ್ದ ರಾಹುಲ್ ಆಳಂದ ತಾಲೂಕಿನ ಆನೂರು ಗ್ರಾಮದ ಭಾಗ್ಯವಂತಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.
ಜೀಪ್ ಚಾಲಕನಾಗಿದ್ದ ರಾಹುಲ್, ಭಾಗ್ಯವಂತಿಯನ್ನು ಪ್ರತಿದಿನ ಕಾಲೇಜಿಗೆ ಕರೆದೊಯ್ಯುತ್ತಿದ್ದಾಗ ಇಬ್ಬರ ಮಧ್ಯೆ ಪ್ರೀತಿ ಹುಟ್ಟುಕೊಂಡಿದೆ. ಫೆಬ್ರವರಿ 16 ರಂದು ಭಾಗ್ಯವಂತಿ ಕರೆದಿದ್ದರಿಂದ ರಾಹುಲ್ ಆಕೆಯ ಮನೆಗೆ ಹೋಗಿದ್ದಾನೆ. ಆದರೆ ಆ ಸಮಯದಲ್ಲಿ ಭಾಗ್ಯವಂತಿಯ ಅಣ್ಣ ಪೃಥ್ವಿರಾಜ್ ಮನೆಗೆ ಬಂದಿದ್ದಾನೆ ಎನ್ನಲಾಗಿದೆ. ತಂಗಿಯೊಂದಿಗೆ ರಾಹುಲ್ ಇರುವುದನ್ನು ಕಂಡು ಕೋಪಗೊಂಡು, ರಾಹುಲ್ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ರಾಹುಲ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಆನಂತರ ಕಾನೂನು ಸಂಘರ್ಷಕ್ಕೊಳಗಾಗಿರುವ ಅಪ್ರಾಪ್ತ ಸೇರಿದಂತೆ ಸ್ನೇಹಿತನೊಂದಿಗೆ ಸೇರಿ ಮೃತದೇಹಕ್ಕೆ ಕಲ್ಲು ಕಟ್ಟಿ ನೀರಿನೊಳಗೆ ಬಿಸಾಡಿದ್ದಾನೆ. ಬಿಸಾಡಿ ಯಾರಿಗೂ ಗೊತ್ತಾಗದಂತೆ ಪೃಥ್ವಿರಾಜ್ ಕುಂಭಮೇಳಕ್ಕೆ ಹೋಗಿದ್ದಾನೆ. ಇನ್ನೊಂದೆಡೆ ರಾಹುಲ್ ನಾಪತ್ತೆಯಾಗಿರುವ ಪ್ರಕರಣ ಬೆನ್ನಟ್ಟಿದ ಪೊಲೀಸರು ಆತನ ಮೊಬೈಲ್ ಸಿಡಿಆರ್ ಆಧರಿಸಿ ತನಿಖೆ ನಡೆಸಿದ್ದಾರೆ. 13 ದಿನಗಳ ನಂತರ ಪೊಲೀಸರಿಗೆ ರಾಹುಲ್ನ ಶವ ಪತ್ತೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೃಥ್ವಿರಾಜ್, ಆತನ ತಂಗಿ ಭಾಗ್ಯವಂತಿ ಮತ್ತು ತಾಯಿ ಸೀತಾಬಾಯಿ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಶವ ಸಾಗಿಸಲು ಸಹಾಯ ಮಾಡಿದ ಆರೋಪದ ಮೇಲೆ ಪವನ್ ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಯುವತಿಯ ವಿಚಾರವನ್ನು ಬಾಯಿಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ, ಆರೋಪಿ ಕುಂಭಮೇಳಕ್ಕೆ ಹೋಗಿರುವ ವಿಚಾರವನ್ನೂ ಹೇಳಿದ್ದಾರೆ ಎನ್ನಲಾಗಿದೆ. ಸದ್ಯ ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.