ಚಿಕ್ಕಬಳ್ಳಾಪುರ: ಹುಚ್ಚು ನಾಯಿಯೊಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿರುವ ಘಟನೆಯೊಂದು ನಡೆದಿದೆ. ಆದರೆ, ಸಕಾಲಕ್ಕೆ ಚಿಕಿತ್ಸೆ ನೀಡಲು ವೈದ್ಯರು ಸಿಗಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹುಚ್ಚು ನಾಯಿ ಗ್ರಾಮಸ್ಥರ ಮೇಲೆ ದಾಳಿ ನಡೆಸಿ ಕೈ, ಕಾಲು, ಮುಖ, ಮಕ್ಕಳು, ವೃದ್ದರು, ಮಹಿಳೆಯರು ಸೇರಿದಂತೆ ಎಲ್ಲರ ಮೇಲೆಯೂ ದಾಳಿ ನಡೆಸಿದೆ. ಗ್ರಾಮದ ಮಹಿಳೆಯೊಬ್ಬರು ನಾಯಿಗಳನ್ನು ಸಾಕಿಕೊಂಡಿದ್ದರು. ಅದರಲ್ಲಿ ಒಂದು ನಾಯಿಗೆ ಹುಚ್ಚು ಹಿಡಿದಿದ್ದು, ಕಳೆದ 2 ದಿನಗಳಿಂದ ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸಿ ಕಚ್ಚುತ್ತಿದೆ ಎನ್ನಲಾಗಿದೆ. ಆದರೆ, ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದರೆ, ಸೂಕ್ತ ಚಿಕಿತ್ಸೆ ನೀಡಲು ವೈದ್ಯರು ಹಾಗೂ ಸಿಬ್ಬಂದಿ ಇರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಳೆದ ಎರಡು ದಿನಗಳಿಂದಲೂ ನಾಯಿ ದಾಳಿ ನಡೆಸುತ್ತಿದೆ. ಗ್ರಾಮದ 5 ವರ್ಷದ ಚಂದುಶ್ರೀ, 2 ವರ್ಷದ ಮಿತುನ್, 39 ವರ್ಷದ ರಾಮು, 45 ವರ್ಷದ ರಾಮಚಂದ್ರ ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೇ, ಚಿಕ್ಕಬಳ್ಳಾಪುರ ಸರ್ಕಾರಿ ಮೆಡಿಕಲ್ ಕಾಲೇಜಿಗೆ ನುಗ್ಗಿದ ನಾಯಿ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ ಜೊಯಬ್, ಸಿಬ್ಬಂದಿ ನಾಗಮಣಿ, ರಬ್ಸಲ್ ಗಾಯಗೊಂಡಿದ್ದಾರೆ.
ಹುಚ್ಚು ನಾಯಿ ಹಾವಳಿಯಿಂದ ಬೆಚ್ಚಿಬಿದ್ದ ಪೆರೇಸಂದ್ರ ಗ್ರಾಮಪಂಚಾಯ್ತಿ ಅಧಿಕಾರಿಗಳು, ಹುಚ್ಚುನಾಯಿ ಹಿಡಿಯುವ ಆಪರೇಷನ್ ಆರಂಭಿಸಿದ್ದಾರೆ. ಆದರೆ ಹುಚ್ಚುನಾಯಿ ಮಾತ್ರ ಕಣ್ಣಿಗೆ ಕಾಣಿಸದೆ ಜನರ ಮೇಲೆ ದಾಳಿ ನಡೆಸುತ್ತಿದೆ. ಕೂಡಲೇ ನಾಯಿಯನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.