ಕೋಲಾರ: ವೈದ್ಯರು ನೀಡಿದ ಇಂಜೆಕ್ಷನ್ ಪಡೆದ ಒಂದೇ ನಿಮಿಷದಲ್ಲಿ 23 ವರ್ಷದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಕೋಲಾರ ತಾಲೂಕಿನ ವಕ್ಕಲೇರಿ ಗ್ರಾಮದಲ್ಲಿ ನಡೆದಿದೆ.
ಇಂಜೆಕ್ಷನ್ ನೀಡಿದ ವೈದ್ಯರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತ ಯುವಕನನ್ನು ನಾಗೇಂದ್ರ (23) ಎಂದು ತಿಳಿದು ಬಂದಿದೆ. ನಾಗೇಂದ್ರಗೆ ಕಳೆದ ರಾತ್ರಿ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಕೂಡಲೇ ಆತ ವಕ್ಕಲೇರಿಯ ಸನ್ ರೈಸ್ ಕ್ಲಿನಿಕ್ ಗೆ ಹೋಗಿದ್ದಾನೆ. ಈ ವೇಳೆ ವೈದ್ಯರು ಆತನಿಗೆ ಇಂಜೆಕ್ಷನ್ ನೀಡಿದ್ದಾರೆ. ಇಂಜೆಕ್ಷನ್ ಪಡೆದ ಕೇವಲ ಒಂದೇ ನಿಮಿಷಕ್ಕೆ ನಾಗೇಂದ್ರ ಸಾವನ್ನಪ್ಪಿದ್ದಾನೆ.
ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದು, ವೈದ್ಯರ ನಿರ್ಲಕ್ಷ್ಯಕ್ಕೆ ಸಾವನಪ್ಪಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತ ನಾಗೇಂದ್ರ ಸಹೋದರ ರವಿ ಕುರಿತು ಮಾತನಾಡಿ, ಆತನಿಗೆ ರಾತ್ರಿ ಜ್ವರ ಬಂದಿತ್ತು. ಕೂಡಲೇ ಆತ ಸನ್ ರೈಸ್ ಕ್ಲಿನಿಕ್ ಗೆ ಕರೆದುಕೊಂಡು ಬಂದಿದ್ದೆ. ವೈದ್ಯರು ಆತನಿಗೆ ಯಾವುದೋ ಒಂದು ಇಂಜೆಕ್ಷನ್ ನೀಡಿದರು. ಆದರೆ ಇಂಜೆಕ್ಷನ್ ನೀಡಿದ ಕೇವಲ ಒಂದೇ ನಿಮಿಷದಲ್ಲಿ ಆದ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.