ಬೆಂಗಳೂರು: ಹಲವು ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಇಂದು ಸಿಎಂ ಜೊತೆ ಖಾಸಗಿ ಸಾರಿಗೆ ಮುಖಂಡರ ಸಭೆ ನಡೆಯಿತು.
ಸಿಎಂ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಲು ತಯಾರಿ ನಡೆಸಿರುವ ಹಿನ್ನೆಲೆಯಲ್ಲಿ ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಲಾಗಿದೆ. ಬಜೆಟ್‌ನಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗಿದೆ. ಸಿಎಂಗೆ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯ ಮಾಡಿದೆ.
ಚಾಲಕರ ಸಂಘದ ಬೇಡಿಕೆಗಳು:
- ಆಟೋ, ಟ್ಯಾಕ್ಸಿ ಖಾಸಗಿ ಬಸ್ ಲಾರಿ, ಮ್ಯಾಕ್ಸಿ ಕ್ಯಾಬ್, ಗೂಡ್ಸ್ ಚಾಲಕರ ವರ್ಗಕ್ಕೆ ಅಸಂಘಟಿತ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು.
- ನಿರುದ್ಯೋಗಿ ಬಾಡಿಗೆ ಆಟೋ ಮತ್ತು ಟ್ಯಾಕ್ಸಿ ಚಾಲನೆ ಮಾಡುವ ಚಾಲಕರು ಸ್ವಾವಲಂಬಿಯಾಗುವಂತೆ ಮಾಡಬೇಕು.
- ಇದಕ್ಕಾಗಿ ಸರ್ಕಾರದ ವಿವಿಧ ಜಾತಿವಾರು ನಿಗಮಗಳಿಂದ ನೇರ ಸಾಲ ಯೋಜನೆಯಡಿ ಸಾಲ ನೀಡಬೇಕು
- ಟ್ಯಾಕ್ಸಿ, ಗೂಡ್ಸ್ ಆಟೋರಿಕ್ಷಾ ಕೊಳ್ಳಲು ಶೇ.95ರಷ್ಟು ಸಾಲವನ್ನು ಹೈಪೋಥಿಕೇಷನ್ ಆಧಾರದ ಮೇಲೆ ನೀಡಬೇಕು.
- ಮುಖ್ಯಮಂತ್ರಿಗಳ ವಸತಿ ಯೋಜನೆಯಡಿಯಲ್ಲಿ ನಿರ್ಮಿಸುತ್ತಿರುವ ಮನೆಗಳಲ್ಲಿ ಶೇಕಡವಾರು ಚಾಲಕರಿಗೆ ಮೀಸಲಿಡಬೇಕು.
- ನಗರ 4 ದಿಕ್ಕುಗಳಲ್ಲೂ ವಾಸಿಸುವ ಚಾಲಕರಿಗಾಗಿ ಪ್ರತ್ಯೇಕ ಕಾಲೋನಿಗಳನ್ನು ನಿರ್ಮಿಸಿ ಕೊಡಬೇಕು
- ಅಸಂಘಟಿತ ಸಾರಿಗೆ ವಲಯ ಚಾಲಕರು ವೃತ್ತಿಯಲ್ಲಿರುವಾಗ ಅಪಘಾತವಾದರೆ, ಅಪಘಾತ ಪರಿಹಾರ ಹಣವಾಗಿ 5 ಲಕ್ಷ ರೂ ಹಣ ಕುಟುಂಬಕ್ಕೆ ನೀಡಬೇಕು.
- ಹೃದಯಾಘಾತದಲ್ಲಿ ಮೃತಪಟ್ಟ ಚಾಲಕರಿಗೂ ಅನ್ವಯಿಸುವಂತೆ ತಿದ್ದುಪಡಿ ಮಾಡಬೇಕು.
- ಸರ್ಕಾರದ ವತಿಯಿಂದ ಚಾಲಕರ ದಿನಾಚರಣೆ ಘೋಷಣೆ ಮಾಡಬೇಕು.
- ಬೆಂಗಳೂರು ನಗರಕ್ಕೆ ಕನಿಷ್ಠ 150 ಚಾಲಕರಿಗೆ ನಿಗದಿ ಮಾಡಿ ಪ್ರಾಮಾಣಿಕ ಹಾಗೂ ಹಿರಿಯ ಚಾಲಕರಿಗೆ ಪ್ರಶಸ್ತಿ ಹಾಗೂ 25 ಸಾವಿರ ರೂ. ಗೌರವಧನ ನೀಡಲು ಕ್ರಮ ವಹಿಸಿ ಘೋಷಣೆ ಮಾಡಬೇಕು.
- ಹೊಸ ಎಲೆಕ್ಟ್ರಿಕ್ EV ಆಟೋರಿಕ್ಷಾ ಕೊಳ್ಳಲು ವಾಹನದ ಬೆಲೆಯಲ್ಲಿ ಶೇ. 50ರಷ್ಟು ಸಹಾಯಧನ ನೀಡಬೇಕು.
- ಪ್ರಯಾಣಿಕರು ಕರೆದುಕೊಂಡು ಹೋಗುವ EV ಆಟೋರಿಕ್ಷಾಗಳಿಗೆ ಪರ್ಮಿಟ್, ಚಾಲನಾಪತ್ರ ಕಡ್ಡಾಯಗೊಳಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.