ನವದೆಹಲಿ: ಡ್ರಗ್ಸ್ ಅಕ್ರಮ ಸಾಗಣೆ, ತಡರಾತ್ರಿಯ ಪಾರ್ಟಿಗಳು, ಸಾಲು ಸಾಲು ಕೊಲೆಗಳಿಂದಲೇ ಜನರಲ್ಲಿ ಭೀತಿ ಹುಟ್ಟಿಸಿದ್ದ, ದೆಹಲಿಯ ಲೇಡಿ ಡಾನ್ (Lady Don) ಎಂದೇ ಖ್ಯಾತಿಯಾಗಿರುವ ಜೋಯಾ ಖಾನ್ ಳನ್ನು (Zoya Khan) ಪೊಲೀಸರು ಬಂಧಿಸಿದ್ದಾರೆ. ಗ್ಯಾಂಗ್ ಸ್ಟರ್ ಹಶೀಮ್ ಬಾಬಾನ ಪತ್ನಿಯಾಗಿರುವ ಈಕೆಯನ್ನು ಈಶಾನ್ಯ ದೆಹಲಿಯಲ್ಲಿ ಬಂಧಿಸಲಾಗಿದ್ದು, 1 ಕೋಟಿ ರೂಪಾಯಿ ಮೌಲ್ಯದ ಮಾದಕವಸ್ತುವನ್ನು ಜಪ್ತಿ ಮಾಡಲಾಗಿದೆ.
ಗ್ಯಾಂಗ್ ಸ್ಟರ್ ಹಶೀಮ್ ಬಾಬಾ ಜೈಲುಪಾಲಾದ ನಂತರ ಆತನ “ಗೂಂಡಾಗಿರಿ”ಯ ಸಾಮ್ರಾಜ್ಯವನ್ನು ಜೋಯಾ ಖಾನ್ ನೋಡಿಕೊಳ್ಳುತ್ತಿದ್ದಳು. ವಂಚನೆ, ಸುಲಿಗೆ, ಡ್ರಗ್ಸ್ ಅಕ್ರಮ ಸಾಗಣೆಯನ್ನು ಗ್ಯಾಂಗ್ ಮೂಲಕ ನಿರ್ವಹಿಸುತ್ತಿದ್ದಳು. ಸುಮಾರು 33 ವರ್ಷದ ಜೋಯಾ ಖಾನ್ ಪೊಲೀಸರರಿಗೆ ಭಾರಿ ತಲೆನೋವಾಗಿದ್ದಳು. ಕೊನೆಗೂ ಈಕೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶದ ಮುಜಾಫರ್ ನಗರದಿಂದ ಅಕ್ರಮವಾಗಿ ಸಾಗಿಸಲಾಗಿದ್ದ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಮಾದಕವಸ್ತುವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ದಾವೂದ್ ಇಬ್ರಾಹಿಂ ಆಪ್ತರೊಂದಿಗೆ ನಂಟು ಹೊಂದಿದ್ದ, ಕೊಲೆ, ಸುಲಿಗೆಯಲ್ಲಿ ಭಾಗಿಯಾಗಿದ್ದ ಹಶೀಮ್ ಬಾಬಾ ಸದ್ಯ ಈಗ ತಿಹಾರ ಜೈಲಿನಲ್ಲಿದ್ದಾನೆ. ಈತನನ್ನು ಪದೇಪದೆ ಭೇಟಿಯಾಗುತ್ತಿದ್ದ ಜೋಯಾ, ದಂಧೆಯ ಕುರಿತು ಇಂಚಿಂಚೂ ಮಾಹಿತಿ ನೀಡುತ್ತಿದ್ದಳು ಎಂದು ತಿಳಿದುಬಂದಿದೆ.
ದಂಧೆ ನಿಭಾಯಿಸುವುದನ್ನು ಪತಿಯಿಂದಲೇ ಜೋಯಾ ಖಾನ್ ತಿಳಿದುಕೊಂಡಿದ್ದಳು. ಕೋಡ್ ಲಾಂಗ್ವೇಜ್ ಮೂಲಕ ಈಕೆ ದಂಧೆಯನ್ನು ನಿಭಾಯಿಸುತ್ತಿದ್ದಳು. ತಡರಾತ್ರಿಯವರೆಗೆ ಸೆಲೆಬ್ರಿಟಿಗಳ ಜತೆ ಪಾರ್ಟಿ ಮಾಡುವುದು, ದುಬಾರಿ ದಿರಸುಗಳನ್ನು ಧರಿಸುವುದು, ಬ್ರ್ಯಾಂಡೆಡ್ ವಸ್ತುಗಳನ್ನು ಖರೀದಿಸುವುದು ಈಕೆಯ ಚಟವಾಗಿತ್ತು. ಈಕೆ ಕೂಡ ಪತಿಯಂತೆ ದೊಡ್ಡ ಡ್ರಗ್ಸ್ ಜಾಲವನ್ನೇ ಹೊಂದಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.