ಬೆಂಗಳೂರು: ದೈತ್ಯ ವ್ಯಕ್ತಿಯನ್ನು ಕಂಡು ಪ್ರಶ್ನಿಸಿದ್ದಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ಚಿಕನ್ ಖರೀದಿಗೆ ಬಂದಿದ್ದ ನೈಜೀರಿಯಾ ಮೂಲದ ವಿದೇಶಿ ಪ್ರಜೆ ಕೊಲೆಯಾಗಿದ್ದಾರೆ. ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 40 ವರ್ಷ ವಯಸ್ಸಿನ ಅಡಿಯಾಕೋ ಮಸಾಲಿಯೋ ಕೊಲೆಯಾಗಿರುವ ವ್ಯಕ್ತಿ.
ಬುಧವಾರ (ಫೆ.20) ಬಾಗಲೂರು ಠಾಣಾ ವ್ಯಾಪ್ತಿಯೊಂದರ ಅಂಗಡಿಗೆ ನೈಜೀರಿಯಾ ಪ್ರಜೆ ಅಡಿಯಾಕೋ ಮಸಾಲಿಯೋ ಚಿಕನ್ ಸೆಂಟರ್ ವೊಂದರಲ್ಲಿ ಚಿಕನ್ ಖರೀದಿಗೆ ಸ್ನೇಹಿತನೊಂದಿಗೆ ಆಗಮಿಸಿದ್ದರು. ಈ ವೇಳೆ ಆತನ ದೈತ್ಯ ದೇಹ, ಓಡಾಟ ಕಂಡು ಸ್ಥಳೀಯರು ಅನುಮಾನ ವ್ಯಕ್ತಪಡಿಸಿ, ಪ್ರಶ್ನಿಸಿದ್ದಾರೆ.
ಈ ವೇಳೆ ದೈತ್ಯ ಪ್ರಜೆ ಹಾಗೂ ಅಲ್ಲಿದ್ದವರೊಂದಿಗೆ ಗಲಾಟೆ ನಡೆದಿದೆ. ಆಗ ವಿದೇಶಿ ಪ್ರಜೆ, ಯಾಸೀನ್ ಖಾನ್ ಎಂಬಾತನಿಗೆ ಹೊಡೆದಿದ್ದಾನೆ. ಅದಕ್ಕೆ ಕೋಪಗೊಂಡಿದ್ದ ಯಾಸೀನ್ ಖಾನ್ ಅಲ್ಲಿಯೇ ಇದ್ದ ಮರದ ತುಂಡಿನಿಂದ ತಲೆಗೆ ಹೊಡೆದಿದ್ದಾನೆ. ಆಗ ಮತ್ತೆ ಗಲಾಟೆ ಜೋರಾಗಿದೆ. ಆಗ ನೈಜೀರಿಯಾ ಪ್ರಜೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಪೊಲೀಸರು ಬಂದು, ಆರೋಪಿ ಯಾಸೀನ್ ಖಾನ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.