ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಮದರಸಾವೊಂದರಲ್ಲಿ ವಿದ್ಯಾರ್ಥಿನಿಯರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ. ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಹೆಗಡೆ ನಗರದಲ್ಲಿರುವ ಜಾಮಿಯ ಆಯೀಷ ಸಿದ್ದಿಕಾ ಆಲ್ ಬನಾತ್ ಮದರಸಾದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ತಪ್ಪು ಮಾಡಿದರು ಎಂದು ಹಸನ್ ಅಲಿ ಎಂಬಾತ ಹಲ್ಲೆ ನಡೆಸಿದ್ದಾನೆ. ವಿದ್ಯಾರ್ಥಿನಿಯರನ್ನು ಕಚೇರಿಗೆ ಕರೆಸಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ. ಈ ಮದರಸಾವನ್ನು ಹಸನ್ ಅಲಿ ತಂದೆ ಅನ್ವರ್ ಅಲಿ ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದ ಕಾರಣ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಮದರಸಾ ಎದುರು ಪ್ರತಿಭಟನೆ ನಡೆಸಿದ್ದಾರೆ. ಹಲ್ಲೆ ನಡೆಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೋಷಕರು ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ನ್ಯಾಯ ಕೊಡಿಸಿ, ಆರೋಪಿಗೆ ಶಿಕ್ಷೆಯಾಗಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಪೊಲೀಸ್ ಆಯುಕ್ತರು, ಎಸಿಪಿ ಮತ್ತು ಡಿಸಿಪಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ಯಾಗ್ ಮಾಡಿ ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾದ ಬಳಿಕ ಕೊತ್ತನೂರು ಪೊಲೀಸರು ಆರೋಪಿ ಹಸನ್ ಅಲಿಯನ್ನು ಬಂಧಿಸಿದ್ದಾರೆ. ಬಾಲನ್ಯಾಯ ಕಾಯ್ದೆಯ ಸೆಕ್ಷನ್ 75 ಮತ್ತು ಬಿಎನ್ ಎಸ್ ಸೆಕ್ಷನ್ 115 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಹಸನ್ ಅಲಿ ಮದರಸಾದ ಪ್ರಾಂಶುಪಾಲರ ತಮ್ಮನಾಗಿದ್ದು, ಪ್ರಾಂಶುಪಾಲರ ಸಲುಗೆಯಿಂದ ಆಗಾಗ ಮದರಸಾಗೆ ಬರುತ್ತಿದ್ದ. ಹೀಗೆ ಬಂದಾಗ ಬಾಲಕಿಯರ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.