ನವದೆಹಲಿ: ಇಂದು ಮಧ್ಯಾಹ್ನ 12 ಗಂಟೆಗೆ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿರುವ ಬಿಜೆಪಿ ನಾಯಕಿ, ಮೊದಲ ಬಾರಿಯ ಶಾಸಕಿ ರೇಖಾ ಗುಪ್ತಾ ಅವರು, ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅಧಿಕೃತ ನಿವಾಸ ‘ಶೀಷ್‌ಮಹಲ್’ ಅನ್ನು ಮ್ಯೂಸಿಯಂ ಆಗಿ ಪರಿವರ್ತಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿರುವ ಎಲ್ಲ ಆಶ್ವಾಸನೆಗಳನ್ನೂ ಈಡೇರಿಸುವುದಾಗಿ ತಿಳಿಸಿದ್ದಾರೆ.
“ಶೀಷ್‌ಮಹಲ್ ಅನ್ನು ನಾವು ವಸ್ತು ಸಂಗ್ರಹಾಲಯವಾಗಿ ಬದಲಾಯಿಸುತ್ತೇವೆ. ಪ್ರಧಾನಿ ಮೋದಿ ಮಾಡಿರುವ ಎಲ್ಲ ಭರವಸೆಗಳನ್ನೂ ನಾವು ಈಡೇರಿಸುತ್ತೇವೆ. ನನ್ನನ್ನು ಈ ಹುದ್ದೆಗೆ ಆಯ್ಕೆ ಮಾಡಿರುವುದಕ್ಕೆ ನಾನು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ” ಎಂದಿದ್ದಾರೆ.
ದೆಹಲಿಯ 6 ಫ್ಲ್ಯಾಗ್ ಸ್ಟಾಫ್ ರಸ್ತೆಯಲ್ಲಿರುವ ಬಂಗಲೆಯ ನವೀಕರಣಕ್ಕೆ ಸಂಬಂಧಿಸಿ ಕೇಜ್ರಿವಾಲ್ ವಿರುದ್ಧ ಬಿಜೆಪಿ ಮುಗಿಬಿದ್ದಿತ್ತು. ಪುನರ್ ನಿರ್ಮಾಣಗೊಂಡ ಈ ಬಂಗಲೆಯು 40,000 ಚದರ ಗಜಗಳಷ್ಟು ವಿಸ್ತಾರ ಹೊಂದಿದೆ. ಇದು 2015 ರಿಂದ ಅಕ್ಟೋಬರ್ 2024 ರವರೆಗೆ ಕೇಜ್ರಿವಾಲ್ ಅವರ ಅಧಿಕೃತ ನಿವಾಸವಾಗಿತ್ತು. ಬಿಜೆಪಿಯ ವಾಗ್ದಾಳಿ ತೀವ್ರಗೊಂಡ ಹಾಗೂ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈ ವೈಭವೋಪೇತ ನಿವಾಸವನ್ನು ಅವರು ಖಾಲಿ ಮಾಡಿದ್ದರು.
ಈ ಬಂಗಲೆಯಲ್ಲಿ ಬಳಸಲಾದ ಐಷಾರಾಮಿ, ಉನ್ನತ ಮಟ್ಟದ ಉಪಕರಣಗಳ ಬಗ್ಗೆ ಅಕ್ಟೋಬರ್ 2024 ರಲ್ಲಿ ಬಿಡುಗಡೆಯಾದ ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ವರದಿಯು ಎತ್ತಿ ತೋರಿಸಿತ್ತು. ಈ ಹಿನ್ನೆಲೆಯಲ್ಲಿ ‘ಶೀಶ್ ಮಹಲ್’ ನವೀಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆಗೆ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಆದೇಶಿಸಿದೆ. ಬಂಗಲೆ ನಿರ್ಮಿಸಲು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಬಗ್ಗೆ ವಿಸ್ತೃತ ತನಿಖೆ ನಡೆಸುವಂತೆಯೂ ಸಿಪಿಡಬ್ಲ್ಯುಡಿಗೆ ನಿರ್ದೇಶನ ನೀಡಿದೆ. ಇದರ ನಡುವೆಯೇ ಈಗ ನಿಯೋಜಿತ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಈ ಬಂಗಲೆಯನ್ನು ಮ್ಯೂಸಿಯಂ ಮಾಡುವುದಾಗಿ ಘೋಷಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಬಂದನಾ ಕುಮಾರಿ ಅವರನ್ನು ಸೋಲಿಸಿ ಶಾಲಿಮಾರ್ ಬಾಗ್‌ನಿಂದ ಗೆಲುವು ಸಾಧಿಸಿದ ಗುಪ್ತಾ ಅವರು ಇಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರು ದೆಹಲಿಯಲ್ಲಿ ಬಿಜೆಪಿಯ ನಾಲ್ಕನೇ ಮುಖ್ಯಮಂತ್ರಿಯಾಗಲಿದ್ದಾರೆ ಮತ್ತು ದಿಲ್ಲಿಯಲ್ಲಿ ಸಿಎಂ ಸ್ಥಾನಕ್ಕೇರಿದ ನಾಲ್ಕನೇ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.