ಪ್ರಯಾಗ್‌ರಾಜ್: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪುಣ್ಯಸ್ನಾನಗೈಯ್ಯುವ ಮಹಿಳಾ ಯಾತ್ರಿಕರ ಫೋಟೋಗಳು ಹಾಗೂ ಆಕ್ಷೇಪಾರ್ಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ಮಾರಾಟ ಮಾಡುತ್ತಿದ್ದ ಆರೋಪಕ್ಕೆ ಸಂಬಂಧಿಸಿ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಧಾರ್ಮಿಕ ಸಮ್ಮೇಳನಕ್ಕೆ ಸಂಬಂಧಿಸಿದ ಹಾದಿ ತಪ್ಪಿಸುವ ಸೋಷಿಯಲ್ ಮೀಡಿಯಾ ಕಂಟೆಂಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದರ ಭಾಗವಾಗಿ ಉತ್ತರಪ್ರದೇಶ ಪೊಲೀಸ್ ಮುಖ್ಯಸ್ಥ ಪ್ರಶಾಂತ್ ಕುಮಾರ್ ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಕುಂಭಮೇಳಕ್ಕೆ ಸಂಬಂಧಿಸಿ ಪೊಲೀಸರ ಸಾಮಾಜಿಕ ಮಾಧ್ಯಮ ತಂಡವು ಜಾಲತಾಣಗಳಲ್ಲಿನ ಕಂಟೆಂಟ್‌ಗಳ ಮೇಲೆ ನಿಗಾ ಇಡುತ್ತಿದೆ. ಅದರಂತೆ, ಮಹಿಳೆಯರು ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡುವ ಮತ್ತು ಬಟ್ಟೆ ಬದಲಾಯಿಸುತ್ತಿರುವಂತಹ ವಿಡಿಯೋಗಳನ್ನು ಕೆಲವು ಕಿಡಿಗೇಡಿಗಳು ಸೆರೆಹಿಡಿದು ಅದನ್ನು ಕೆಲವು ಪ್ಲಾಟ್ ಫಾರಂಗಳಲ್ಲಿ ಅಪ್‌ಲೋಡ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇನ್ನೂ ಕೆಲವೆಡೆ ಅಂಥ ಫೋಟೋಗಳನ್ನು ಮಾರಾಟ ಮಾಡುತ್ತಿರುವ ಆಘಾತಕಾರಿ ವಿಚಾರವೂ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು, ಉತ್ತರಪ್ರದೇಶದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಮಹಿಳೆಯರ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವುದು ಅವರ ಖಾಸಗಿತನ ಮತ್ತು ಘನತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಕೊತ್ವಾಲಿ ಕುಂಭಮೇಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾನೂನಾತ್ಮಕ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 17ರಂದು ಮಹಿಳಾ ಯಾತ್ರಿಕರ ಆಕ್ಷೇಪಾರ್ಹ ವಿಡಿಯೋಗಳನ್ನು ಪೋಸ್ಟ್ ಮಾಡಿರುವ ಇನ್ ಸ್ಟಾಗ್ರಾಂ ಖಾತೆಯೊಂದರ ವಿರುದ್ಧ ಕೇಸು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಇನ್ ಸ್ಟಾಗ್ರಾಂನ ಮಾತೃಸಂಸ್ಥೆಯಾದ ಮೆಟಾದಿಂದ ಆ ಖಾತೆಯ ಮೂಲದ ಬಗ್ಗೆ ಮಾಹಿತಿ ಕೋರಿದ್ದಾರೆ. ಆ ಮಾಹಿತಿಯ ಮೇರೆಗೆ ಆ ಖಾತೆಯನ್ನು ನಿರ್ವಹಿಸುತ್ತಿರುವವರು ಯಾರು ಎಂಬುದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 19ರಂದು ಇಂತಹ ಮತ್ತೊಂದು ಪ್ರಕರಣ ದಾಖಲಾಗಿದ್ದು, ಟೆಲಿಗ್ರಾಂ ಚಾನೆಲ್‌ವೊಂದು ಇದೇ ಮಾದರಿಯ ವಿಡಿಯೋಗಳನ್ನು ಮಾರಾಟಕ್ಕಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಚಾನೆಲ್ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗುತ್ತಿದೆ ಎಂದೂ ಮಾಹಿತಿ ನೀಡಿದ್ದಾರೆ.