ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಕಳುಹಿಸಿರುವ ಭಾರತ ತಂಡದಲ್ಲಿ ಮೂವರು ಸ್ಪಿನ್ ಆಲ್‌ರೌಂಡರ್‌ಗಳು ಸೇರಿದಂತೆ ಐವರು ಸ್ಪಿನ್ನರ್‌ಗಳಿದ್ದಾರೆ. ಈ ನಿರ್ಧಾರ ಟೀಕೆಗೆ ಒಳಗಾಗಿತ್ತು. ಬುಧವಾರ ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಐವರು ಸ್ಪಿನ್ನರ್‌ಗಳಿಗೆ ಅವಕಾಶ ನೀಡಿದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಬಾಂಗ್ಲಾದೇಶ ವಿರುದ್ದ ಫೆಬ್ರವರಿ 20 ರಂದು ಭಾರತ ತಂಡ ತನ್ನ ಮೊದಲನೇ ಪಂದ್ಯವನ್ನು ಆಡಲಿದೆ. ಬುಧವಾರ ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿದ್ದ ಟೀಮ್ ಇಂಡಿಯಾ ನಾಯಕನಿಗೆ ಪತ್ರಕರ್ತರು ಸತತ ಪ್ರಶ್ನೆಗಳನ್ನು ಕೇಳಿದ್ದರು. ಈ ಎಲ್ಲಾ ಪ್ರಶ್ನೆಗಳಿಗೂ ಹಿಟ್‌ಮ್ಯಾನ್ ಉತ್ತರ ನೀಡಿದ್ದಾರೆ.
ನಮ್ಮಲ್ಲಿ ಮೂವರು ಸ್ಪಿನ್ ಆಲ್‌ರೌಂಡರ್‌ಗಳಿದ್ದಾರೆ. ಇಬ್ಬರು ಪೂರ್ಣ ಪ್ರಮಾಣದ ಸ್ಪಿನ್ನರ್‌ಗಳಿದ್ದಾರೆ. ಅಲ್ಲದೆ ಎದುರಾಳಿ ತಂಡಗಳಲ್ಲಿ ಮೂವರು ಫಾಸ್ಟ್ ಬೌಲಿಂಗ್ ಆಲ್‌ರೌಂಡರ್‌ಗಳು ಸೇರಿದಂತೆ ಒಟ್ಟು ಆರು ಮಂದಿ ವೇಗಿಗಳಿದ್ದಾರೆ. ಇದನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ ಎಂದು ರೋಹಿತ್ ಶರ್ಮಾ ಗರಂ ಆದರು.
“ನಮ್ಮ ತಂಡದಲ್ಲಿ ಇಬ್ಬರು ಸ್ಪಿನ್ನರ್‌ಗಳು ಹಾಗೂ ಮೂವರು ಆಲ್‌ರೌಂಡರ್‌ಗಳಿದ್ದಾರೆ. ಇದರಲ್ಲಿ ಮೂವರು ಆಟಗಾರರು ಬೌಲಿಂಗ್ ಜೊತೆ ಬ್ಯಾಟ್ ಕೂಡ ಮಾಡಬಲ್ಲರು. ಬೇರೆ ತಂಡಗಳಲ್ಲಿ ಫಾಸ್ಟ್ ಬೌಲಿಂಗ್ ಆಲ್‌ರೌಂಡರ್‌ಗಳಿದ್ದಾರೆ. ನಿಮ್ಮಲ್ಲಿ ಆರು ಮಂದಿ ಫಾಸ್ಟ್ ಬೌಲರ್‌ಗಳಿದ್ದಾರೆಂದು ನೀವು ಏಕೆ ಪ್ರಶ್ನೆ ಮಾಡುವುದಿಲ್ಲ,” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ತಂಡವನ್ನು ಸಮರ್ಥಿಸಿಕೊಂಡ ರೋಹಿತ್ ಶರ್ಮಾ
ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡದ ಆಯ್ಕೆಯನ್ನು ಸಮರ್ಥಿಸಿಕೊಂಡ ರೋಹಿತ್ ಶರ್ಮಾ, ಎರಡು ಬಗೆಯ ಕೌಶಲವುಳ್ಳ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ತಂಡದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ನೆರವು ಕೊಡಲಿದ್ದಾರೆ ಎಂದು ಹೇಳಿದರು.
“ನಮ್ಮ ಸಾಮರ್ಥ್ಯದ ಮೇಲೆ ನಾವು ಕೆಲಸ ಮಾಡುತ್ತಿದ್ದೇವೆ ಹಾಗೂ ಇದರ ಆಧಾರದ ಮೇಲೆ ತಂಡವನ್ನು ಕಟ್ಟುತ್ತಿದ್ದೇವೆ. ಎರಡೆರಡು ಕೌಶಲ ಹೊಂದಿರುವವರನ್ನು ನಾವು ಪ್ರಯತ್ನಿಸುತ್ತಿದ್ದೇವೆ,” ಎಂದು ರೋಹಿತ್ ಶರ್ಮಾ ಸಮರ್ಥಿಸಿಕೊಂಡಿದ್ದಾರೆ.
ಆಯ್ಕೆ ಪ್ರಶ್ನಿಸಿದ್ದ ಪಾರ್ಥಿವ್ ಪಟೇಲ್
ಭಾರತ ತಂಡದಲ್ಲಿ ಐವರು ಸ್ಪಿನ್ನರ್‌ಗಳಿಗೆ ಅವಕಾಶ ನೀಡಿದ್ದನ್ನು ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಟೀಕಿಸಿದ್ದರು. ಅಲ್ಲದೆ ಐವರು ಸ್ಪಿನ್ನರ್‌ಗಳಲ್ಲಿ ಒಬ್ಬರನ್ನು ಕೈ ಬಿಟ್ಟು ಕನಿಷ್ಠ ಒಬ್ಬರು ಫಾಸ್ಟ್ ಬೌಲರ್ ಅನ್ನು ಆಯ್ಕೆ ಮಾಡಬೇಕಾಗಿತ್ತು ಎಂದು ಹೇಳಿದ್ದರು.
“ಭಾರತ ತಂಡದಲ್ಲಿ ಜಾಸ್ತಿ ಸ್ಪಿನ್ನರ್‌ಗಳಿದ್ದಾರೆ. ಟೀಮ್ ಇಂಡಿಯಾದಲ್ಲಿ ಇನ್ನೊಬ್ಬ ಫಾಸ್ಟ್ ಬೌಲರ್‌ಗೆ ಅವಕಾಶ ನೀಡಬೇಕಾಗಿತ್ತು,” ಎಂದು ಪಾರ್ಥಿವ್ ಪಟೇಲ್ ತಿಳಿಸಿದ್ದಾರೆ.