ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಹತ್ತಿರದ ಸಿಮೆಂಟ್ ಕಾರ್ಖಾನೆಯಲ್ಲಿ ರಕ್ತದೊತ್ತಡದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಕಾರ್ಮಿಕನ ಮೃತದೇಹವನ್ನು ಅಮಾನವೀಯವಾಗಿ ಎಳೆದುಕೊಂಡು ಹೋಗಿರುವ ಘಟನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ.
ಬಿಹಾರ ಮೂಲದ ಕಾರ್ಮಿಕನ (Bihar Labour)ಮೃತದೇಹವನ್ನು ಅಮಾನವೀಯವಾಗಿ ಎಳೆದೊಯ್ದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕಾರ್ಖಾನೆಯ 6 ಸಿಬ್ಬಂದಿ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಸೇಡಂ ಪೊಲೀಸ್ ಠಾಣೆಯಲ್ಲಿ (Sedam Police Station) ಈ ಕುರಿತು ಪ್ರಕರಣ ದಾಖಲಾಗಿದೆ. ಬಿಹಾರ ಮೂಲದ ಚಂದನ್‌ಸಿಂಗ್ ಕಳೆದ ಎರಡು ದಿನಗಳ ಹಿಂದೆ ಅಧಿಕ ರಕ್ತದೊತ್ತಡಂದಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಶವ ಸಾಗಣೆ ಸಂದರ್ಭದಲ್ಲಿ ಕೆಲವು ಸಿಬ್ಬಂದಿ ಆತನ ಮೃತದೇಹವನ್ನ ದರದರನೆ ಎಳೆದೊಯ್ದಿದ್ದರು. ಈ ಕುರಿತು ಉತ್ತರ ಭಾರತದ ಕಾರ್ಮಿಕರಾದ ಹೈದರ್ ಅಲಿ, ಅಜಯ್, ರವಿಶಂಕರ್, ಹರಿಂದರ್, ರಮೇಶ್ಚಂದ್ರ ಹಾಗೂ ಅಖಿಲೇಶ್ ವಿರುದ್ಧ ಪೋಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಾರ್ಮಿಕನ ಸಾವಿಗೆ ನ್ಯಾಯ ಒದಗಿಸುವಂತೆ ಕೋರಿ ಸಹ ಕಾರ್ಮಿಕರು ಕಾರ್ಖಾನೆ ಆವರಣದಲ್ಲಿ ಶವವಿಟ್ಟು ಪ್ರತಿಭಟನೆ ನಡೆಸುವ ನೆಪದಲ್ಲಿ ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟು ಮಾಡಿದ್ದಾರೆ ಎಂದು ಕೂಡ ಪೊಲೀಸರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.