ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ಹೈಕಮಾಂಡ್ ನೋಟಿಸ್ ಜಾರಿ ಮಾಡಿದೆ. ಆದರೆ, ಮೊದಲ ನೋಟಿಸ್ ಉತ್ತರದಲ್ಲಿದ್ದ ಹಳೇ ಕಥೆಯನ್ನೇ 2ನೇ ನೋಟಿಸ್ ಉತ್ತರದಲ್ಲೂ ಹೇಳಿದ್ದಾರೆ. ಇದರ ಪರಿಣಾಮ ಯತ್ನಾಳ್ ಉತ್ತರವನ್ನು ಕೇಂದ್ರೀಯ ಶಿಸ್ತು ಸಮಿತಿ ಒಪ್ಪಿಲ್ಲ ಎನ್ನಲಾಗಿದೆ.
ಶಾಸಕ ಯತ್ನಾಳ್, ಕೇಂದ್ರೀಯ ಶಿಸ್ತು ಸಮಿತಿ ಕೊಟ್ಟಿದ್ದ ಶೋಕಾಸ್ ನೋಟಿಸ್‌ಗೆ ಕೊಟ್ಟ ಉತ್ತರವೇ ಈಗ ಬಿಜೆಪಿ ಪಾಳಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಯತ್ನಾಳ್ ಗೆ ಕಳೆದ ವರ್ಷದ ಡಿ. 1ರಂದು ಮೊದಲ ಶೋಕಾಸ್ ನೋಟಿಸ್ ಹಾಗೂ ಕಳೆದ ಫೆ.10 ರಂದು 2ನೇ ಶೋಕಾಸ್ ನೋಟಿಸ್ ನೀಡಲಾಗಿತ್ತು. ಆದರೆ, ಯತ್ನಾಳ್ ಅವರು ಮೊದಲ ನೋಟಿಸ್‌ಗೆ ಕೊಟ್ಟಿದ್ದ ಉತ್ತರವನ್ನೇ ಪುನರಾವರ್ತಿಸಿ ಎರಡನೇ ನೋಟಿಸ್‌ಗೂ ಕೊಟ್ಟಿದ್ದಾರೆ. ಉತ್ತರದಲ್ಲಿ ವಿಜಯೇಂದ್ರ, ಯಡಿಯೂರಪ್ಪ ಕುಟುಂಬ ರಾಜಕಾರಣ, ಏಕಪಕ್ಷೀಯ ನಡೆ, ಸ್ವಂತ ತಂಡ, ಹಿರಿಯರ ಕಡೆಗಣನೆ, ಹೋರಾಟ ವೈಫಲ್ಯ, ಹೊಂದಾಣಿಕೆ ರಾಜಕೀಯಗಳ ಕುರಿತು ಆರೋಪಿಸಿದ್ದರು. ಆದರೆ, ನೋಟಿಸ್ ಗೆ ಅಸಲಿ ಕಾರಣ ನೀಡಿಲ್ಲ. ಹೀಗಾಗಿ ಅದನ್ನು ಪೆಂಡಿಂಗ್ ನಲ್ಲಿ ಇಡಲಾಗಿದೆ ಎನ್ನಲಾಗಿದೆ.
ಎರಡನೇ ನೋಟಿಸ್‌ನಲ್ಲಿ ಶಿಸ್ತು ಸಮಿತಿಯು, ನೀವು ಕೊಟ್ಟ ಭರವಸೆ ಸುಳ್ಳು ಮಾಡಿ ಬಹಿರಂಗ ಹೇಳಿಕೆ ಮುಂದುವರಿಸಿದ್ದೀರಿ. ಒಳ್ಳೆಯ ನಡೆ ತೋರುವ ಬಗ್ಗೆ ನೀವು ಕೊಟ್ಟ ಭರವಸೆ ಮುರಿದಿದ್ದೀರಿ ಯಾಕೆ ಎಂಬ ವಿಚಾರಕ್ಕೆ ಸ್ಪಷ್ಟೀಕರಣ ಕೇಳಿತ್ತು. ಆದರೂ ಮತ್ತೆ ಹಳೆಯ ಕಥೆಯನ್ನೇ ಯತ್ನಾಳ್ ಹೇಳಿದ್ದಾರೆ ಎನ್ನಲಾಗಿದೆ. ಈ ಜಗಳ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುವುದನ್ನು ನೋಡಬೇಕಿದೆ.