ಬೆಂಗಳೂರು: ಮುಡಾ ಪ್ರಕರಣದಲ್ಲಿ ಲೋಕಾಯುಕ್ತದಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಂಗ್ಯವಾಡಿದ್ದಾರೆ.
ಟ್ವಿಟ್ ಮೂಲಕ ವ್ಯಂಗ್ಯವಾಡಿದ ಅವರು, ಲೋಕಾಯುಕ್ತ ಮುಖ್ಯಮಂತ್ರಿಗಳಿಗೆ ನೀಡಿರುವ ಕ್ಲೀನ್ ಚಿಟ್ ನಿರೀಕ್ಷಿತವೇ ಆಗಿತ್ತು. ತಾವೇ ನೇಮಿಸಲ್ಪಡುವ ಅಧಿಕಾರಿಗಳಿಂದಲೇ ನಡೆಸಲ್ಪಡುವ ತನಿಖೆಯಲ್ಲಿ ಮುಖ್ಯಮಂತ್ರಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವೇ? ನಾವು ಮೊದಲಿನಿಂದಲೂ ಸಿಬಿಐ ತನಿಖೆಗಾಗಿ ಒತ್ತಾಯಿಸುತ್ತಿದ್ದೆವು, ಸಿಬಿಐ ತನಿಖೆಯಿಂದ ಮಾತ್ರ ಸಾವಿರಾರು ನಿವೇಶನಗಳು ಲೂಟಿಯಾಗಿರುವ ಮುಡಾ ಹಗರಣದಲ್ಲಿ ನ್ಯಾಯ ಸಿಗಲು ಸಾಧ್ಯ. ಆದರೆ ಸಿದ್ದರಾಮಯ್ಯನವರ 14 ನಿವೇಶನಗಳು, ಲೂಟಿಯಾಗಿರುವ ಸಾವಿರಾರು ನಿವೇಶನಗಳನ್ನು ಹಾಗೂ ಲೂಟಿ ಮಾಡಿದ ಭ್ರಷ್ಟ ಅಧಿಕಾರಿಗಳು ಹಾಗೂ ಪ್ರಭಾವಿಗಳನ್ನು ರಕ್ಷಿಸುತ್ತಿದೆ. ರಾಜ್ಯ ಕಂಡು ಕೇಳರಿಯದ ಬಹುದೊಡ್ಡ ಭ್ರಷ್ಟ ಹಗರಣದ ಪಾರದರ್ಶಕ ತನಿಖೆ ನಡೆಯಬೇಕೆಂದರೆ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸರ್ಕಾರದಿಂದ ಅಂತರ ಕಾಯ್ದುಕೊಂಡ ತನಿಖಾ ಸಂಸ್ಥೆಯಿಂದ ಮಾತ್ರ ಸಾಧ್ಯ ಎಂಬುದು ನ್ಯಾಯ ನಿರೀಕ್ಷಿಸುವ ಪ್ರತಿಯೊಬ್ಬರೂ ಒಪ್ಪುವ ಮಾತು.
ಈಗಲೂ ಬಿಜೆಪಿ ತನ್ನ ನಿಲುವನ್ನು ಬದಲಿಸುವ ಪ್ರಶ್ನೆಯೇ ಇಲ್ಲ, ಮುಡಾ ಹಗರಣದ ತನಿಖೆ ಸಿಬಿಐನಿಂದ ನಡೆಯಬೇಕೆಂಬುದೇ ನಮ್ಮ ಒತ್ತಾಯವಾಗಿದೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ A1 ಆರೋಪಿ ಸ್ಥಾನದಲ್ಲಿ ಮುಖ್ಯಮಂತ್ರಿಯೊಬ್ಬರು ತನಿಖೆ ಎದುರಿಸಿದ ಪ್ರಥಮ ಪ್ರಕರಣ ಇದಾಗಿದೆ,ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಲೋಕಾಯುಕ್ತ ನೀಡಿರುವ ಕ್ಲೀನ್ ಚಿಟ್ ದುರದೃಷ್ಟಕರ. ಶುದ್ಧ ವ್ಯಕ್ತಿತ್ವ ನಮ್ಮದು ಎಂದು ಹೇಳಿಕೊಳ್ಳುತ್ತಿದ್ದ ಸಿದ್ದರಾಮಯ್ಯನವರು ನವರು ನೈತಿಕವಾಗಿ ಸೋತು ಬಹುದಿನಗಳಾಗಿವೆ,ಭಂಡತನ ಅವರ ಬಂಡವಾಳವಾಗಿದೆ. ಈ ನೆಲದ ಕಾನೂನಿನ ಮೇಲೆ ನಮಗೆ ವಿಶ್ವಾಸವಿದೆ,ಅಕ್ರಮ, ಭ್ರಷ್ಟಾಚಾರಗಳಿಗೆ ಕುಣಿಕೆ ಬಿಗಿಯುವುದು ಖಚಿತ,ಸತ್ಯ ಗೆಲ್ಲುವುದು ನಿಶ್ಚಿತ ಎಂದು ಬರೆದುಕೊಂಡಿದ್ದಾರೆ.