ಬೆಂಗಳೂರು, ಫೆಬ್ರವರಿ 2025 : ನಗರದ ಸ್ಪರ್ಶ್ ಆಸ್ಪತ್ರೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ರೆಟ್ರೋವೈರಲ್-ಪಾಸಿಟಿವ್ ಕ್ಯಾಡಾವೆರಿಕ್ ಕಿಡ್ನಿ ಕಸಿ (ಕಿಡ್ನಿ ಟ್ರಾನ್ಸ್ಪ್ಲಾಂಟ್) ಮಾಡುವ ಮೂಲಕ ಎಚ್ಐವಿ ಪಾಸಿಟಿವ್ ರೋಗಿಗಳ ಬಾಳಲ್ಲಿ ಆಶಾಕಿರಣ ಮೂಡಿಸಿದೆ. 58 ವರ್ಷದ ಪುರುಷ ರೋಗಿಯ ಮೇಲೆ ಈ ಮಹತ್ವದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ.
ಕಸಿಗೆ ಒಳಪಟ್ಟ ರೋಗಿಯು ಮೊದಲು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹೈಪರ್ಟೆನ್ಷನ್ ಹಾಗೂ ಕ್ರಾನಿಕ್ ಕಿಡ್ನಿ ರೋಗ ಕಾರಣದಿಂದ 2019ರಿಂದಲೇ ಅವರಿಗೆ ಹೀಮೋಡಯಾಲಿಸಿಸ್ನಡೆಸಲಾಗುತ್ತಿತ್ತು. ಆದರೆ ಎಚ್ಐವಿ ಪಾಸಿಟಿವ್ ಸ್ಥಿತಿಯ ಕಾರಣ ಅನೇಕ ಆಸ್ಪತ್ರೆಗಳು ಅವರಿಗೆ ಕಸಿ ಮಾಡಲು ನಿರಾಕರಿಸಿದ್ದವು. ಸ್ಪರ್ಶ್ ಆಸ್ಪತ್ರೆಯಲ್ಲಿ ನೋಂದಾಯಿಸಿಕೊಂಡ ನಂತರ ಸಂಪೂರ್ಣ ವೈದ್ಯಕೀಯ ಮೌಲ್ಯಮಾಪನ ನಡೆಸಲಾಯಿತು ಹಾಗೂ ಯಾವುದೇ ಅಪಾಯಕಾರಿಯಾದ ಸೋಂಕುಗಳು ಇಲ್ಲದಿರುವುದನ್ನು ಮತ್ತು ಅವರ ಸಿಡಿ4 ಹಂತ ಸಹಜವಾಗಿರುವುದನ್ನು ಗುರುತಿಸಲಾಯಿತು. ಬಳಿಕ ಕಸಿ ನಡೆಸಬಹುದು ಎಂಬುದನ್ನು ನಿರ್ಧರಿಸಲಾಯಿತು
2025 ಜನವರಿಯಲ್ಲಿ, ಆಸ್ಪತ್ರೆಯ ತಜ್ಞರು 58 ವರ್ಷದ ಕ್ಯಾಡಾವೆರಿಕ್ ದಾನಿಯಿಂದ ಕಿಡ್ನಿ ಪಡೆದು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಮೂತ್ರ ಉತ್ಪಾದನೆಯ ಕೊರತೆಯಂತಹ ಸವಾಲುಗಳು ಎದುರಾಗಿದ್ದರೂ, ವೈದ್ಯರು ಇಂಟ್ರಾವೆನಸ್ ಡಯಾರೆಟಿಕ್ಸ್ ಮೂಲಕ ಮೂತ್ರಪಿಂಡದ ಕಾರ್ಯವನ್ನು ಪುನಶ್ಚೇತನಗೊಳಿಸಿದ್ದಾರೆ.
ಡಾ. ಪ್ರಶಾಂತ್ ಗಣೇಶ್ (ಯುರಾಲಜಿಸ್ಟ್ ಮತ್ತು ಕಿಡ್ನಿ ಟ್ರಾನ್ಸ್ಪ್ಲಾಂಟ್ ಶಸ್ತ್ರತಜ್ಞ), ಡಾ. ಸುನಿಲ್ ಆರ್ (ಹಿರಿಯ ನೆಫ್ರೋಲಾಜಿಸ್ಟ್), ಡಾ. ಜಿ.ಆರ್. ಮಂಜುನಾಥ್ (ಯುರಾಲಜಿಸ್ಟ್) ಮತ್ತು ಡಾ. ಭವ್ಯಾ ಆರ್ (ಸಹಾಯಕ ನೆಫ್ರೋಲಾಜಿಸ್ಟ್) ಜಟಿಲ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಜ್ಞ ವೈದ್ಯರುಗಳಾಗಿದ್ದಾರೆ.
ಸ್ಪರ್ಶ್ ಆಸ್ಪತ್ರೆಯ ಹಿರಿಯ ನೆಫ್ರೋಲಾಜಿ ಹಾಗೂ ಟ್ರಾನ್ಸ್ಪ್ಲಾಂಟ್ ತಜ್ಞ ಡಾ. ಹರ್ಷಕುಮಾರ್ ಎಚ್.ಎನ್ ಈ ಬಗ್ಗೆ ಮಾತನಾಡಿ, ”ಈ ಐತಿಹಾಸಿಕ ಶಸ್ತ್ರಚಿಕಿತ್ಸೆ ಕರ್ನಾಟಕದಲ್ಲಿಯೇ ಪ್ರಥಮವಾಗಿದೆ. ಎಚ್ಐವಿ ಪಾಸಿಟಿವ್ ರೋಗಿಗಳಿಗೆ ಜೋಡಣೆ ಅವಕಾಶಗಳು ಸೀಮಿತವಾಗಿರುವುದರಿಂದ ಈ ಶಸ್ತ್ರಚಿಕಿತ್ಸೆ ಅಂಥವರಿಗಾಗಿ ಹೊಸ ಅವಕಾಶ ತೆರೆದಂತಾಗಿದೆ” ಎಂದು ಹೇಳಿದ್ದಾರೆ.
ಡಾ. ಪ್ರಶಾಂತ್ ಗಣೇಶ್, ” ರೋಗಿಯ ತೂಕ ಹೆಚ್ಚಿರುವುದರಿಂದ ಶಸ್ತ್ರಚಿಕಿತ್ಸೆ ಹೆಚ್ಚಿನ ಕ್ಲಿಷ್ಟಕರವಾಗಿತ್ತು . ಎಚ್ಐವಿ ರೋಗಿಗಳಲ್ಲಿ ಇಮ್ಯುನೋಲಾಜಿಕಲ್ ಸವಾಲುಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಇಂತಹ ಶಸ್ತ್ರಚಿಕಿತ್ಸೆಗಳನ್ನು ಮಾಡುವಾಗ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತಗೆದುಕೊಳ್ಳಬೇಕು” ಎಂದು ವಿವರಿಸಿದರು.
ಡಾ. ಸುನಿಲ್ ಆರ್,”ಬೆಂಗಳೂರಿನ ಬಹುತೇಕ ಆಸ್ಪತ್ರೆಗಳು ಎಚ್ಐವಿ ಪಾಸಿಟಿವ್ ರೋಗಿಗಳಿಗೆ ಡಯಾಲಿಸಿಸ್ ಸೇವೆ ಒದಗಿಸುತ್ತಿಲ್ಲ. ಹೀಗಾಗಿ ಜೋಡಣೆ ಅವರಿಗೆ ಉತ್ತಮ ದೀರ್ಘಕಾಲೀನ ಪರಿಹಾರ” ಎಂದು ಹೇಳಿದರು.
ಸ್ಪರ್ಶ್ ಆಸ್ಪತ್ರೆಯ ಈ ಐತಿಹಾಸಿಕ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಎಚ್ಐವಿ ಪಾಸಿಟಿವ್ ರೋಗಿಗಳಿಗೆ ಹೊಸ ಜೀವನದಲ್ಲಿ ಆಶಾಕಿರಣ ಮೂಡಿಸಿದೆ. ನಾವು ವೈದ್ಯಕೀಯ ತಂತ್ರಜ್ಞಾನ ಮತ್ತು ಪ್ರಗತಿಯ ದೃಷ್ಟಿಯಿಂದ ಮುಂದೆ ಸಾಗುತ್ತಿದ್ದೇವೆ.” ಎಂದು ಸ್ಪರ್ಶ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಸುದೀಂದ್ರ ಭಟ್ ಹೇಳಿದ್ದಾರೆ.