ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ (Anna Bhagya Scheme) ಅಡಿಯಲ್ಲಿ ಇನ್ನು ಮುಂದೆ ದುಡ್ಡಿನ ಬದಲು ಅಕ್ಕಿಯನ್ನೇ ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದುವರೆಗೆ ರಾಜ್ಯ ಸರ್ಕಾರವು ಪ್ರತಿ ತಿಂಗಳು 5 ಕೆ.ಜಿ ಹಾಗೂ 170 ರೂಪಾಯಿಯನ್ನು ನೀಡಲಾಗುತ್ತಿತ್ತು. ಇನ್ನುಮುಂದೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಸಚಿವ ಕೆ.ಎಚ್.ಮುನಿಯಪ್ಪ ಅವರು ಮಾಹಿತಿ ನೀಡಿದ್ದಾರೆ.
ಫೆಬ್ರವರಿ ತಿಂಗಳಿನಿಂದಲೇ ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅದರಂತೆ, ರಾಜ್ಯದ ಫಲಾನುಭವಿಗಳಿಗೆ ಇದೇ ತಿಂಗಳಿನಿಂದಲೇ 10 ಕೆ.ಜಿ ಅಕ್ಕಿ ದೊರೆಯಲಿದೆ. ಕಳೆದ ಮೂರು ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ ಹಣವನ್ನು ಜಮೆ ಮಾಡಿರಲಿಲ್ಲ. ಅಕ್ಕಿ ನೀಡುವ ಕಾರಣದಿಂದಲೇ ಹಣವನ್ನು ಜಮೆ ಮಾಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
2023ರ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿತ್ತು. ಅದರಂತೆ, ರಾಜ್ಯ ಸರ್ಕಾರವು 2023ರ ಜುಲೈ 1ರಿಂದ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ಕೇಂದ್ರ ಸರ್ಕಾರವು ಅಕ್ಕಿ ಕೊಡಲು ನಿರಾಕರಿಸಿದ ಕಾರಣ ರಾಜ್ಯ ಸರ್ಕಾರವು 5 ಕೆ.ಜಿ ಅಕ್ಕಿ ಹಾಗೂ ಪ್ರತಿ ಕೆ.ಜಿಗೆ 34 ರೂಪಾಯಿಯಂತೆ 5 ಕೆ.ಜಿಗೆ 170 ರೂಪಾಯಿಯನ್ನು ಫಲಾನುಭವಿಗಳಿಗೆ ನೀಡಲು ತೀರ್ಮಾನಿಸಿತ್ತು.
ಈಗ ಕೇಂದ್ರ ಸರ್ಕಾರವು ಅಕ್ಕಿ ಕೊಡುತ್ತಿರುವ ಕಾರಣದಿಂದಾಗಿ ದುಡ್ಡಿನ ಬದಲು ಅಕ್ಕಿಯನ್ನೇ ನೀಡಲು ತೀರ್ಮಾನಿಸಿದೆ. ಕೇಂದ್ರ ಸರ್ಕಾರದಿಂದ ಪ್ರತಿ ಕೆ.ಜಿ.ಗೆ 22 ರೂಪಾಯಿ ಕೊಟ್ಟು ರಾಜ್ಯ ಸರ್ಕಾರ ಅಕ್ಕಿ ಖರೀದಿಸುತ್ತಿದೆ. ಸಾಗಣೆ ವೆಚ್ಚ ಸೇರಿ ಕೆ.ಜಿ.ಗೆ 25 ರೂಪಾಯಿ ಆಗಲಿದೆ. ಹಾಗಾಗಿ, ಹಣದ ಬದಲು ಅಕ್ಕಿ ಕೊಡಲು ತೀರ್ಮಾನಿಸಲಾಗಿದೆ. ಮುಕ್ತ ಮಾರುಕಟ್ಟೆ ಯೋಜನೆ ಅನ್ವಯ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅಕ್ಕಿ ಕೊಡುತ್ತಿದೆ.