
9ನೇ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಆರಂಭಗೊಂಡಿದೆ. ಪಾಕಿಸ್ತಾನದ ಆತಿಥ್ಯದಲ್ಲಿ ಟೂರ್ನಿ ನಡೆಯುತ್ತಿರುವ ಕಾರಣ ಕ್ರಿಕೆಟ್ ಕಾರಿಡಾರ್ನಲ್ಲಿ ಜೋರು ಚರ್ಚೆ ನಡೆಯುತ್ತಿದೆ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಬುಧವಾರ ಉದ್ಘಾಟನಾ ಪಂದ್ಯದಲ್ಲಿ ಆಡಲಿದ್ದು, 8 ತಂಡಗಳ ಈ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವವರು ಯಾರು ಎಂಬ ಕದನ ಕುತೂಹಲ ಸೃಷ್ಟಿಯಾಗಿದೆ.
2017ರಲ್ಲಿ ಕೊನೇ ಬಾರಿ ಚಾಂಪಿಯನ್ಸ್ ಟ್ರೋಫಿ ಇಂಗ್ಲೆಂಡ್‌ನಲ್ಲಿ ನಡೆದು ಪಾಕಿಸ್ತಾನ ಮೊದಲ ಟ್ರೋಫಿ ಗೆದ್ದಿತು. ನಂತರದ ಟೂರ್ನಿ 2021ರಲ್ಲಿ ನಡೆಯಬೇಕಿತ್ತು, ಕೊರೊನಾ ಸೋಂಕು ಅದಕ್ಕೆ ಅಡಚಣೆ ಉಂಟು ಮಾಡಿದ ಕಾರಣ ಸುಮಾರು 8 ವರ್ಷಗಳ ನಂತರ ಈ ಪಂದ್ಯಾವಳಿಯನ್ನು ಮತ್ತೆ ಆಯೋಜಿಸಲಾಗುತ್ತಿದೆ. 2002ರಲ್ಲಿ ‘ಐಸಿಸಿ ಚಾಂಪಿಯನ್ಸ್ ಟ್ರೋಫಿ’ ಎಂದು ಮರು ನಾಮಕರಣವಾಗುವ ಮುಂಚೆ ಈ ಟೂರ್ನಿಯನ್ನು ‘ಐಸಿಸಿ ನಾಕೌಟ್ ಟ್ರೋಫಿ ’ಎಂದು ಹೇಳಲಾಗುತ್ತಿತ್ತು
ಚಾಂಪಿಯನ್ಸ್ ಟ್ರೋಫಿಯನ್ನು ಮೊದಲ ಬಾರಿಗೆ 1998ರಲ್ಲಿ ಆರಂಭಿಸಲಾಯಿತು. ಮೊಹಮ್ಮದ್ ಅಜರುದ್ದೀನ್ ನೇತೃತ್ವದ ಭಾರತ ತಂಡವು ಅಲ್ಲಿ ಸೆಮಿಫೈನಲ್ ತಲುಪಿತ್ತು. ಭಾರತ ತಂಡ ಮತ್ತು ಆಸ್ಟ್ರೇಲಿಯಾ ತಲಾ ಎರಡು ಟ್ರೋಫಿಗಳನ್ನು ಗೆದ್ದು ಟೂರ್ನಿಯ ಯಶಸ್ವಿ ತಂಡಗಳೆನಿಸಿಕೊಂಡಿವೆ. 2002ರಲ್ಲಿ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ಭಾರತ ಟ್ರೋಫಿ ಗೆದ್ದರೂ, ಆತಿಥೇಯ ತಂಡದೊಂದಿಗೆ ಪ್ರಶಸ್ತಿ ಹಂಚಿಕೊಳ್ಳಲಾಗಿತ್ತು. 2013ರ ಋತುವಿನಲ್ಲಿ, ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಭಾರತ ತಂಡ ಪ್ರಶಸ್ತಿ ಗೆದ್ದು ಬೀಗಿತ್ತು.
ಈ ಬಾರಿ ಟೂರ್ನಿಯಲ್ಲಿ ಪಾಲ್ಗೊಂಡಿರುವ ಎಲ್ಲ ಎಂಟು ತಂಡಗಳು ಬಲಿಷ್ಠವಾಗಿದ್ದು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಏತನ್ಮಧ್ಯೆ, ಭಾರತ ತಂಡದ ಪ್ರದರ್ಶನದ ಬಗ್ಗೆ ಎಲ್ಲ ನೋಟ ನೆಟ್ಟಿದೆ. ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾವು ಪ್ರಬಲ ಸ್ಪರ್ಧಿಯಾಗಿ ಸ್ಪರ್ಧಾವಳಿ ಪ್ರವೇಶಿಸುತ್ತಿದೆ. ಆತಿಥೇಯ ಹಾಗೂ ಬದ್ಧ ವೈರಿ ಪಾಕಿಸ್ತಾನದೊಂದಿಗಿನ ಪಂದ್ಯ ಸೇರಿದಂತೆ ಉಳಿದ ಪಂದ್ಯಗಳಲ್ಲಿ ತನ್ನ ಪರಾಕ್ರಮ ಮೆರೆಯುವ ವಿಶ್ವಾಸ ವ್ಯಕ್ತಪಡಿಸಿದೆ.
2023ರ ಏಕದಿನ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಸೋತು ರನ್ನರ್ಸ್ ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದ ಭಾರತ ಭಾರತ ‘ಮಿನಿ ವಿಶ್ವಕಪ್’ ಎನಿಸಿಕೊಂಡಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ 3ನೇ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ.

ಭಾರತ ತಂಡ ಹೇಗಿದೆ?
ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್, ರೋಹಿತ್ ಶರ್ಮಾ ಜೊತೆಗೆ ಬಲಿಷ್ಠ ಆಲ್‌ರೌಂಡ್ ವಿಭಾಗದೊಂದಿಗೆ ತಂಡವು ಸಮತೋಲಿತವಾಗಿರುವುದರಿಂದ ಅತ್ಯುತ್ತಮ ಪ್ರದರ್ಶನದ ನಿರೀಕ್ಷೆ ಮೂಡಿಸಿದೆ. ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಶಕ್ತಿ ತುಂಬಬಲ್ಲರು. ವೇಗಿ ಹರ್ಷಿತ್ ರಾಣಾ ಹಾಗೂ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಸೇರ್ಪಡೆಯೊಂದಿಗೆ ತಂಡದಲ್ಲಿ ವೈವಿಧ್ಯತೆ ಕಂಡು ಬರುತ್ತಿದೆ.
8 ಪಂದ್ಯಗಳಲ್ಲಿ ಮಾತ್ರ ಸೋಲು
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ದಾಖಲೆ ಅತ್ಯುತ್ತಮವಾಗಿದೆ. ತಂಡವು ಇಲ್ಲಿಯವರೆಗೆ ಒಟ್ಟು 29 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 18 ಪಂದ್ಯಗಳಲ್ಲಿ ಜಯಗಳಿಸಿದೆ. 8 ಪಂದ್ಯಗಳಲ್ಲಿ ಮಾತ್ರ ಸೋತಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಗರಿಷ್ಠ ಪಂದ್ಯಗಳನ್ನು ಗೆದ್ದ ತಂಡಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಈ 5 ತಂಡಗಳು ವಿರುದ್ಧ ಇದುವರೆಗೆ ಟೀಮ್ ಇಂಡಿಯಾ ಸೋಲು ಕಂಡಿಲ್ಲ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಬಾಂಗ್ಲಾದೇಶ, ಜಿಂಬಾಬ್ವೆ ಮತ್ತು ಕೀನ್ಯಾ.
ಭಾರತ ಮತ್ತು ಪಾಕಿಸ್ತಾನ ನಡುವಿನ ದಾಖಲೆ
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವು ಇದುವರೆಗೆ ಸೋಲಿಸಲು ಸಾಧ್ಯವಾಗದ ಒಂದು ತಂಡವಿದೆ. ಅದು ನ್ಯೂಜಿಲೆಂಡ್. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಕೇವಲ ಒಂದು ಪಂದ್ಯ ಮಾತ್ರ ನಡೆದಿರುವುದು ಗಮನಾರ್ಹ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಇಲ್ಲಿಯವರೆಗೆ ಒಟ್ಟು 5 ಪಂದ್ಯಗಳು ನಡೆದಿವೆ. ಇದರಲ್ಲಿ ಟೀಮ್ ಇಂಡಿಯಾ ಎರಡು ಪಂದ್ಯಗಳನ್ನು ಗೆದ್ದರೆ, ಪಾಕಿಸ್ತಾನ ಮೂರರಲ್ಲಿ ಮೇಲುಗೈ ಸಾಧಿಸಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಸಾಧನೆ
ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾವು ಶ್ರೀಮಂತ ದಾಖಲೆ ಹೊಂದಿದೆ. ಇದುವರೆಗಿನ 8 ಆವೃತ್ತಿಗಳ ಟೂರ್ನಿಗಳಲ್ಲಿ ಎರಡು ಬಾರಿ ಪ್ರಶಸ್ತಿ ಜಯಿಸಿದ್ದರೆ, ಒಟ್ಟು ನಾಲ್ಕು ಬಾರಿ ಫೈನಲ್‌ಗೆ ತಲುಪಿದ ಖ್ಯಾತಿ ಹೊಂದಿದೆ .
1998 (ಬಾಂಗ್ಲಾದೇಶದಲ್ಲಿ)
ಉದ್ಘಾಟನಾ ಆವೃತ್ತಿಯಲ್ಲಿ ಭಾರತ ಮುಹಮ್ಮದ್ ಅಜರುದ್ದೀನ್ ನೇತೃತ್ವದಲ್ಲಿ ಫೈನಲ್‌ಗೆ ತಲುಪಿತ್ತು. ಆದರೆ ವೆಸ್ಟ್‌ಇಂಡೀಸ್ ವಿರುದ್ಧ 6 ವಿಕೆಟ್ ಗಳಿಂದ ಸೋತಿತ್ತು. ದಕ್ಷಿಣ ಆಫ್ರಿಕಾ ತಂಡವು ಚಾಂಪಿಯನ್ ಆಗಿತ್ತು.

2000(ಕೀನ್ಯದಲ್ಲಿ)
ಸೌರವ್ ಗಂಗೂಲಿ ನಾಯಕತ್ವದ ಭಾರತ ತಂಡವು ಫೈನಲ್‌ಗೆ ತಲುಪಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಗಳ ಅಂತರದಿಂದ ಸೋಲುಂಡಿತ್ತು. ಅಲ್ಲಿ ಗಂಗೂಲಿ ಬಾರಿಸಿದ್ದ 117 ರನ್ ವ್ಯರ್ಥವಾಗಿತ್ತು. ಔಟಾಗದೆ 102 ರ ನ್ ಗಳಿಸಿದ್ದ ಕ್ರಿಸ್ ಕೈರ್ನ್ಸ್ ಕಿವೀಸ್ ಗೆ ಕೊನೆಯ ಓವರ್‌ನಲ್ಲಿ ರೋಚಕ ಜಯ ತಂದುಕೊಟ್ಟಿದ್ದರು.
2002(ಶ್ರೀಲಂಕಾದಲ್ಲಿ)
ಫೈನಲ್ ಪಂದ್ಯಕ್ಕೆ ನಿಗದಿಯಾಗಿದ್ದ ಎರಡೂ ದಿನಗಳ ಕಾಲ ಮಳೆ ಕಾಟ ನೀಡಿದ್ದ ಕಾರಣ ಸೌರವ್ ಗಂಗೂಲಿ ಸಾರಥ್ಯದ ಭಾರತ ಹಾಗೂ ಆತಿಥೇಯ ಶ್ರೀಲಂಕಾ ತಂಡವನ್ನು ‘ಜಂಟಿ ವಿಜೇತರು’ ಎಂದು ಪ್ರಕಟಿಸಲಾಯಿತು. ಇದು ಭಾರತಕ್ಕೆ ಮೊದಲ ಪ್ರಶಸ್ತಿ.
2004(ಇಂಗ್ಲೆಂಡ್‌ನಲ್ಲಿ)
ಪಾಕಿಸ್ತಾನದ ವಿರುದ್ಧ ಸೋತ ಭಾರತ ಕ್ರಿಕೆಟ್ ತಂಡವು ಗುಂಪು ಹಂತ ದಾಟಲಿಲ್ಲ.
2006(ಭಾರತದಲ್ಲಿ)
ಆತಿಥ್ಯವಹಿಸಿದ್ದ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ನೇತೃತ್ವವಹಿಸಿದ್ದರು. ಗ್ರೂಪ್ ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಮಾತ್ರ ಜಯ ಸಾಧಿಸಿದ್ದ ಭಾರತ ತಂಡವು ಆಸ್ಟ್ರೇಲಿಯ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧ ಸೋಲನುಭವಿಸಿ ಟೂರ್ನಿಯಿಂದ ನಿರ್ಗಮಿಸಿತ್ತು.
2009(ದಕ್ಷಿಣ ಆಫ್ರಿಕಾದಲ್ಲಿ)
ಎಂ.ಎಸ್. ಧೋನಿ ನಾಯಕತ್ವದಲ್ಲಿ ಭಾರತ ತಂಡವು ಗ್ರೂಪ್ ಹಂತದಲ್ಲಿ ಟೂರ್ನಿಯಿಂದ ನಿರ್ಗಮಿಸಿತ್ತು. ಸತತ ಮೂರನೇ ಆವೃತ್ತಿಯಲ್ಲಿ ಗುಂಪು ಹಂತದಲ್ಲಿ ನ ನಿರ್ಗಮಿಸುವ ಮೂಲಕ ನಿರಾಸೆ ಎದುರಿಸಿತ್ತು. ಗ್ರೂಪ್ ಹಂತದಲ್ಲಿ ಆಸ್ಟ್ರೇಲಿಯ ಹಾಗೂ ಪಾಕಿಸ್ತಾನ ತಂಡಕ್ಕೆ ಮಣಿದಿತ್ತು.
2013(ಇಂಗ್ಲೆಂಡ್‌ನಲ್ಲಿ)
ಧೋನಿ ನಾಯಕತ್ವದ ಭಾರತ ತಂಡವು ಪಂದ್ಯಾವಳಿಯಲ್ಲಿ ಒಂದೂ ಪಂದ್ಯವನ್ನು ಸೋಲದೆ 2ನೇ ಬಾರಿ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಟ್ಟಿತು. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು 5 ರನ್‌ನಿಂದ ರೋಚಕವಾಗಿ ಮಣಿಸಿತ್ತು.
2017(ಇಂಗ್ಲೆಂಡ್):
ಭಾರತ ತಂಡವು 4ನೇ ಬಾರಿ ಫೈನಲ್‌ಗೆ ತಲುಪಿತ್ತು. ಆದರೆ ಪಾಕಿಸ್ತಾನ ತಂಡದ ವಿರುದ್ಧ 180 ರನ್ ಅಂತರದಿಂದ ಸೋತಿತ್ತು. ಫಖರ್ ಝಮಾನ್ ಶತಕ ಸಿಡಿಸಿ ಭಾರತಕ್ಕೆ ಮುಳುವಾಗಿದ್ದರು.
……..
ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್. ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ.