ವಾಷಿಂಗ್ಟನ್: ಭೂಮಿಗೆ ಮರಳಲಾಗದೇ ಕಳೆದ 9 ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಬಾಕಿಯಾಗಿರುವ ಭಾರತ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್‌ಗೆ ಸಂಬಂಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಸಲಹೆಗಾರ, ಉದ್ಯಮಿ ಎಲಾನ್ ಮಸ್ಕ್ ಅವರು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಈ ಇಬ್ಬರು ಗಗನಯಾತ್ರಿಗಳು ಬಾಹ್ಯಾಕಾಶದಲ್ಲೇ ಉಳಿಯುವಂತಾಗಲು ಹಿಂದಿನ ಬೈಡೆನ್ ಸರ್ಕಾರವೇ ಕಾರಣ. ರಾಜಕೀಯ ಕಾರಣಗಳಿಗಾಗಿ ಅವರನ್ನು ವಾಪಸ್ ಕರೆತರಲಿಲ್ಲ ಎಂದು ಟ್ರಂಪ್ ಮತ್ತು ಮಸ್ಕ್ ಆರೋಪಿಸಿದ್ದಾರೆ.
ವಾಷಿಂಗ್ಟನ್ ಡಿಸಿಯಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿ ವೇಳೆ ಈ ಇಬ್ಬರು ಗಗನಯಾತ್ರಿಗಳ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸುನೀತಾ ಹಾಗೂ ವಿಲ್ಮೋರ್‌ರನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ. ರಾಜಕೀಯ ಕಾರಣಗಳಿಗಾಗಿ ಅವರನ್ನು ಬಾಹ್ಯಾಕಾಶದಿಂದ ವಾಪಸ್ ಕರೆತರಲಿಲ್ಲ. ಇದು ಸರಿಯಾದ ಕ್ರಮವಲ್ಲ ಎಂದಿದ್ದಾರೆ. ಇದೇ ವೇಳೆ ಮಸ್ಕ್ ಮಾತನಾಡಿ, ಬೈಡೆನ್ ಆಡಳಿತವು ಅವರನ್ನು ಕರೆತರಲು ನಮ್ಮ ಕಂಪನಿಗೆ ಅನುಮತಿ ನೀಡಲಿಲ್ಲ. ಗಗನಯಾತ್ರಿಗಳನ್ನು ಅಲ್ಲೇ ಬಿಟ್ಟುಬಿಡೋಣ ಎಂಬ ಆಲೋಚನೆ ಅವರದ್ದಾಗಿತ್ತು. ಆದರೆ ಈಗ ಅಧ್ಯಕ್ಷರ ಸೂಚನೆಯ ಮೇರೆಗೆ ನಾವು ಇಬ್ಬರೂ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ವ್ಯವಸ್ಥೆ ಮಾಡುತ್ತಿದ್ದೇವೆ. ಈ ಹಿಂದೆಯೂ ನಾವು ಹಲವು ಬಾರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಗಳಿಂದ ಗಗನಯಾತ್ರಿಗಳನ್ನು ಕರೆತಂದಿದ್ದೇವೆ. ಈ ಬಾರಿಯೂ ಇದರಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
2024ರ ಜೂನ್ ತಿಂಗಳಲ್ಲಿ ಸುನೀತಾ ಹಾಗೂ ಬುಚ್ ವಿಲ್ಮೋರ್ ಅವರು ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ(ಐಎಸ್ಎಸ್)ವನ್ನು ತಲುಪಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 10 ದಿನಗಳಲ್ಲಿ ಅವರು ವಾಪಸಾಗಬೇಕಿತ್ತು. ಆದರೆ, ಸ್ಟಾರ್ ಲೈನರ್ ನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ, ಅದರಲ್ಲಿ ಭೂಮಿಗೆ ಮರಳುವುದು ಅಪಾಯ ಎಂಬ ಕಾರಣಕ್ಕೆ ಇಬ್ಬರು ಗಗನಯಾತ್ರಿಗಳೂ ಐಎಸ್ಎಸ್ ನಲ್ಲೇ ಉಳಿಯಬೇಕಾಯಿತು. ಈಗ ಮಸ್ಕ್ ಮಾಲೀಕತ್ವದ ಸ್ಪೇಸ್ಎಕ್ಸ್ ಕಂಪನಿಯ ಕ್ರ್ಯೂ-9 ಕ್ಯಾಪ್ಸೂಲ್ ಬಾಹ್ಯಾಕಾಶಕ್ಕೆ ತೆರಳಿದ್ದು, ಸದ್ಯದಲ್ಲೇ ಈ ಇಬ್ಬರನ್ನೂ ಭೂಮಿಗೆ ಕರೆತರುವ ನಿರೀಕ್ಷೆಯಿದೆ.