ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಆರಂಭದಲ್ಲಿ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಿದ ರಾಜ್ಯ ಸರ್ಕಾರಕ್ಕೆ ಅನುದಾನದ ಕೊರತೆ ಕಾಡುತ್ತಿದೆ. ಹಾಗಾಗಿ ಎರಡು-ಮೂರು ತಿಂಗಳಿಂದ ಗೃಹಲಕ್ಷ್ಮಿ, ಅನ್ನಭಾಗ್ಯದ ಹಣ ಜಮೆ ಮಾಡಿಲ್ಲ. ಇದರ ಬೆನ್ನಲ್ಲೇ ಗ್ಯಾರಂಟಿ ಯೋಜನೆ ಬಗ್ಗೆ ಸಚಿವ ಕೆ. ಜೆ. ಜಾರ್ಜ್ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ. ಪ್ರತಿ ತಿಂಗಳು ಜಮೆ ಮಾಡಲು ಗೃಹಲಕ್ಷ್ಮಿ, ಅನ್ನಭಾಗ್ಯದ ಹಣ ತಿಂಗಳ ಸಂಬಳ ಅಲ್ವಲ್ಲ ಎಂದು ಹೇಳಿದ್ದು, ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವುದಾಗಿ ಕಾಂಗ್ರೆಸ್ ನಾಯಕರು ಕಳೆದ ಚುನಾವಣೆಯಲ್ಲಿ ಅಬ್ಬರದ ಪ್ರಚಾರ ಮಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಗೃಹಲಕ್ಷ್ಮಿ ಯೋಜನೆಯನ್ನೂ ಜಾರಿಗೆ ತಂದರು. ಆದರೆ, ಕಳೆದ 2-3 ತಿಂಗಳಿಂದ ಹೆಣ್ಣುಮಕ್ಕಳ ಖಾತೆಗಳಿಗೆ ಹಣ ಜಮೆ ಆಗಿಲ್ಲ. ಮೊದಲು ಪ್ರತಿ ತಿಂಗಳು ಹಣ ಹಾಕುತ್ತೇವೆ ಎಂದು ಸರ್ಕಾರವೇ ಹೇಳಿತ್ತು. ಈಗ ನೋಡಿದರೆ ಸಚಿವ ಜಾರ್ಜ್ ಅವರೇ ಇದು ತಿಂಗಳ ಸಂಬಳ ಅಲ್ಲ ಎಂದು ಉಡಾಫೆಯ ಮಾತುಗಳನ್ನು ಆಡಿದ್ದಾರೆ. ಇದಕ್ಕೆ ಮಹಿಳೆಯರು ಸೇರಿ ಎಲ್ಲರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಮಹಿಳೆಯರು ಮಕ್ಕಳ ಶಾಲೆ ಫೀಸ್ ಕಟ್ಟಿದರು. ಮಗನ ಓದಿಗೆ ಲ್ಯಾಪ್ ಟಾಪ್ ಕೊಡಿಸಿದರು. ಶೌಚಾಲಯ ಕಟ್ಟಿಸಿದರು, ಫ್ರಿಡ್ಜ್ ಖರೀದಿಸಿದರು ಎಂದಾಗ ರಾಜ್ಯ ಸರ್ಕಾರ ಖುಷಿ ಪಟ್ಟಿತ್ತು. ಆದರೆ ಕಳೆದ ಕೆಲ ತಿಂಗಳಿಂದ ಜನರ ಖಾತೆಗೆ ಹಣ ಜಮೆ ಆಗುತ್ತಿಲ್ಲ. ಶೀಘ್ರದಲ್ಲೇ ಜಮೆ ಮಾಡುತ್ತೇವೆ ಎಂದು ಸರ್ಕಾರ ಸಮಯ ದೂಡುತ್ತಿದೆ. ಇದರ ಮಧ್ಯೆಯೇ ಕೆ. ಜೆ. ಜಾರ್ಜ್ ಹೇಳಿಕೆಯು ಜನಾಕ್ರೋಶಕ್ಕೆ ಕಾರಣವಾಗಿದೆ.