ಟೊರೊಂಟೊ: ಕೆನಡಾದ ಟೊರೊಂಟೊ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ವಿಮಾನವೊಂದು ಲ್ಯಾಂಡ್ ಆಗುವಾಗ ಜಾರಿ ಬಿದ್ದು ಪಲ್ಟಿಯಾಗಿದೆ. ಡೆಲ್ಟಾ ಏರ್ ಲೈನ್ಸ್ ವಿಮಾನವು ಅಪಘಾತಕ್ಕೀಡಾಗಿ (Plane Crash) ತಲೆಕೆಳಗಾಗಿ ಬಿದ್ದಿದೆ. ರನ್ವೇನಲ್ಲಿ ಹಿಮ ತುಂಬಿದ್ದ ಕಾರಣ ವಿಮಾನ ನಿಯಂತ್ರಣಕ್ಕೆ ಸಿಗದೇ ಬೋರಲು ಬಿದ್ದಿದೆ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಪಘಾತದಲ್ಲಿ 18 ಪ್ರಯಾಣಿಕರು ಗಾಯಗೊಂಡಿದ್ದಾರೆ. ಸೇಂಟ್ ಪಾಲ್ ವಿಮಾನ ನಿಲ್ದಾಣದಿಂದ (MSP) ಹೊರಟಿದ್ದ ವಿಮಾನವು 76 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಸೇರಿದಂತೆ 80 ಜನರನ್ನು ಹೊತ್ತೊಯ್ಯುತ್ತಿತ್ತು. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಧ್ಯಾಹ್ನ 2:15 ಕ್ಕೆ (ಸ್ಥಳೀಯ ಸಮಯ) ಘಟನೆ ನಡೆದಿದೆ. ಬಳಿಕ ಆ ವಿಮಾನ ನಿಲ್ದಾಣದಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ವಿಮಾನಗಳ ಟೇಕ್ಆಫ್ ಮತ್ತು ಲ್ಯಾಂಡಿಂಗ್ ನಿಲ್ಲಿಸಲಾಗಿತ್ತು.
ಘಟನೆ ನಂತರ ತುರ್ತು ಕಾರ್ಯಾಚರಣೆ ತಂಡಗಳು ಕಾರ್ಯಾಚರಣೆ ನಡೆಸಿರುವುದಾಗಿ ಟೊರೊಂಟಾ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿಳಿಸಿದೆ.
ಪ್ರಯಾಣಿಕರೊಬ್ಬರು ಅನುಭವ ಹೇಳಿಕೊಂಡಿದ್ದು, ವಿಮಾನ ಮಗುಚಿ ಬಿದ್ದ ನಂತರ ನಾವು ತಲೆಕೆಳಗಾದೆವು, ಬಾವಲಿ ರೀತಿ ವಿಮಾನದಲ್ಲಿ ನೇತಾಡುತ್ತಿದ್ದೆವು ಎಂದು ಹೇಳಿಕೊಂಡಿದ್ದಾರೆ.
ಅಪಘಾತದ ಕಾರಣವನ್ನು ತನಿಖೆ ಮಾಡುವುದಾಗಿ ಕೆನಡಾದ ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ಅದು ಇನ್ನೂ ತಿಳಿದುಬಂದಿಲ್ಲ. ಆದರೆ ತೀವ್ರ ಹಿಮಪಾತವಾದ್ದರಿಂದ ಅಪಘಾತ ಸಂಭವಿಸಿರಬಹುದು ಎಂದು ತಿಳಿದು ಬಂದಿದೆ.