ನವದೆಹಲಿ: ‘ಇಂಡಿಯಾಸ್ ಗಾಟ್ ಲೇಟೆಂಟ್’ ವೆಬ್ ಶೋನಲ್ಲಿ ‘ಪೋಷಕರೊಂದಿಗೆ ಲೈಂಗಿಕತೆ’ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿರುವ ರಣವೀರ್ ಅಲಹಾಬಾದಿಯಾ ಅವರಿಗೆ ಸುಪ್ರೀಂ ಕೋರ್ಟ್ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.
ತಮ್ಮ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಫ್ಐಆರ್‌ಗಳಿಗೆ ಸಂಬಂಧಿಸಿ ರಣವೀರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಿಚಾರಣೆ ನಡೆಸಿತು. ರಣವೀರ್ ಅವರ ನಿವೃತ್ತ ಸಿಜೆಐ ಡಿ.ವೈ.ಚಂದ್ರಚೂಡ್ ಅವರ ಪುತ್ರ, ವಕೀಲ ಅಭಿನವ್ ಚಂದ್ರಚೂಡ್ ವಕಾಲತ್ತು ವಹಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ರಣವೀರ್‌ಗೆ ಬಂಧನದಿಂದ ರಕ್ಷಣೆ ನೀಡಿತಾದರೂ, ಮುಂದಿನ ಆದೇಶದವರೆಗೂ ರಣವೀರ್, ಸಮಯ್ ರೈನಾ ಮತ್ತು ಅಪೂರ್ವ ಮುಖಿಜಾ ಅವರು ಯಾವುದೇ ಶೋ ನಡೆಸುವಂತಿಲ್ಲ ಎಂದು ಸೂಚಿಸಿದೆ. ಅಲ್ಲದೆ, ರಣವೀರ್ ಹೇಳಿಕೆ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ ನ್ಯಾ.ಸೂರ್ಯ ಕಾಂತ್ ಮತ್ತು ನ್ಯಾ. ಎನ್. ಕೋಟೀಶ್ವರ್ ಸಿಂಗ್ ಅವರ ನ್ಯಾಯಪೀಠ, “ನಮ್ಮ ದೇಶದಲ್ಲಿ ಇದು ಅಶ್ಲೀಲವಲ್ಲ ಎಂದ ಮೇಲೆ, ಇನ್ನು ಯಾವುದು ಅಶ್ಲೀಲ?” ಎಂದು ಪ್ರಶ್ನಿಸಿತು.

“ರಣವೀರ್ ಬಳಸಿದ ಭಾಷೆಯನ್ನು ನೀವು ಒಪ್ಪುತ್ತೀರಾ? ಅಶ್ಲೀಲತೆಯ ಮಾನದಂಡ ಯಾವುದು? ಇದು ಬೇಜವಾಬ್ದಾರಿಯ ಪರಮಾವಧಿ. ನಾವು ಜನಪ್ರಿಯರಾಗಿದ್ದೇವೆ, ಹಾಗಾಗಿ ಏನು ಬೇಕಿದ್ದರೂ ಮಾತನಾಡಬಹುದು ಎಂದು ಅವರು ಭಾವಿಸಿದ್ದಾರೆ. ಅಂದರೆ ಅವರು ಇಡೀ ಸಮಾಜವನ್ನೇ ಹಗುರವಾಗಿ ಪರಿಗಣಿಸಿದ್ದಾರೆ. ಈ ಭೂಮಿಯಲ್ಲಿ ಯಾರಾದರೂ ಅಂತಹ ಕೀಳುಮಟ್ಟದ ಭಾಷೆಯನ್ನು ಬಳಸುತ್ತಾರೆಯೇ? ಅವರ ಮನಸ್ಸಲ್ಲೇ ಕೊಳಕು ತುಂಬಿದೆ. ಇಂತಹ ವ್ಯಕ್ತಿಗಳ ಪರ ನ್ಯಾಯಾಲಯಗಳೇಕೆ ನಿಲ್ಲಬೇಕು?” ಎಂದು ರಣವೀರ್ ಪರ ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿತು.
ಇದೇ ವೇಳೆ, 31 ವರ್ಷದ ರಣವೀರ್ ವಿರುದ್ಧವೂ ಹರಿಹಾಯ್ದ ಕೋರ್ಟ್, “ನೀನು ಬಳಸಿರುವ ಪದಗಳಿಂದ ಹೆತ್ತವರು, ಅಣ್ಣ-ತಮ್ಮ, ಅಕ್ಕ-ತಂಗಿಯರು ಕೂಡ ನಾಚಿಕೆ ಪಡಬೇಕು” ಎಂದಿತು.