ಲಕ್ನೋ: ಉತ್ತರಪ್ರದೇಶದ ಝಾನ್ಸಿಯಲ್ಲಿ ಇತ್ತೀಚೆಗೆ 27 ವರ್ಷದ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತಿ ಹಾಗೂ ಆತನ ಮನೆಯವರು ಹೇಳಿದ್ದರೆ, ಆಕೆಯನ್ನು ಗಂಡ, ಅತ್ತೆ-ಮಾವ ಸೇರಿ ಕೊಲೆ ಮಾಡಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬಸ್ಥರ ಆರೋಪಿಸಿದ್ದರು. ಈ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ಈಗ ಮಹಿಳೆಯ 4 ವರ್ಷದ ಮಗಳು ಬರೆದಿರುವ ಚಿತ್ರದ ಮೂಲಕ ಕೊಲೆ ರಹಸ್ಯವನ್ನು ಭೇದಿಸುವ ಹಂತಕ್ಕೆ ತಲುಪಿದ್ದಾರೆ. ಮಗುವು ಬರೆದು ತೋರಿಸಿದ ಚಿತ್ರವನ್ನು ಆಧರಿಸಿ, ಮಹಿಳೆಯ ಪತಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಈ ಘಟನೆ ನಡೆದಿರುವುದು ಝಾನ್ಸಿಯ ಕೊಟ್ವಾಲಿ ಪ್ರದೇಶದ ಶಿವ ಪರಿವಾರ್ ಕಾಲೋನಿಯಲ್ಲಿ. ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಮಹಿಳೆಯ ತಂದೆ ಸಂಜೀವ್ ತ್ರಿಪಾಠಿ, “2019 ರಲ್ಲಿ ಝಾನ್ಸಿ ನಿವಾಸಿ ಸಂದೀಪ್ ಬುಧೋಲಿಯಾ ಅವರಿಗೆ ನಮ್ಮ ಮಗಳನ್ನು ವಿವಾಹ ಮಾಡಿ ಕೊಟ್ಟಿದ್ದೆವು. ಮದುವೆ ವೇಳೆ 20 ಲಕ್ಷ ರೂ. ನಗದು ಮತ್ತು ಇತರೆ ಉಡುಗೊರೆಗಳನ್ನು ವರದಕ್ಷಿಣೆಯಾಗಿ ನೀಡಿದ್ದೆವು. ಆದರೆ, ಮದುವೆಯಾದ ಕೂಡಲೇ ಅಳಿಯ ಮತ್ತು ಅವನ ಮನೆಯವರು ಕಾರು ಬೇಕೆಂದು ಒತ್ತಡ ಹಾಕತೊಡಗಿದರು. ಅದಕ್ಕೆ ನಾವು ನಿರಾಕರಿಸಿದೆವು. ಅಲ್ಲಿಂದ ನನ್ನ ಮಗಳ ಮೇಲೆ ದೈಹಿಕ, ಮಾನಸಿಕ ಚಿತ್ರಹಿಂಸೆ ಆರಂಭವಾಯಿತು.
ನಾನು ಈ ಬಗ್ಗೆ ಪೊಲೀಸರಿಗೆ ದೂರನ್ನೂ ನೀಡಿದ್ದೆ. ಕೊನೆಗೆ ಸಂಧಾನ ಮಾತುಕತೆ ಮೂಲಕ ಎಲ್ಲವನ್ನೂ ಸರಿಪಡಿಸಲಾಯಿತು. ಬಳಿಕ ನನ್ನ ಮಗಳು ಹೆಣ್ಣುಮಗುವಿಗೆ ಜನ್ಮ ನೀಡಿದಳು. ಆಗ ಗಂಡು ಮಗು ಹುಟ್ಟಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಹೀಯಾಳಿಸಲು ಆರಂಭಿಸಿದರು. ಹೆರಿಗೆಯಾದ ಕೂಡಲೇ ಗಂಡ ಮತ್ತು ಅವನ ಮನೆಯವರು ಆಸ್ಪತ್ರೆಯಿಂದ ಹೊರಹೋದವರು ವಾಪಸ್ ಬರಲೇ ಇಲ್ಲ, ಕೊನೆಗೆ ನಾನೇ ಆಸ್ಪತ್ರೆಯ ಬಿಲ್ ಪಾವತಿಸಿ ಮಗಳನ್ನು ಮನೆಗೆ ಕರೆತಂದೆ. ಕೆಲವು ತಿಂಗಳ ನಂತರ ಅಳಿಯ ಬಂದು ಮಗಳು ಮತ್ತು ಮೊಮ್ಮಗಳನ್ನು ತನ್ನ ಮನೆಗೆ ಕರೆದೊಯ್ದ. ಆದರೆ, ಆಗಾಗ್ಗೆ ಅವರ ನಡುವೆ ಜಗಳ ನಡೆಯುತ್ತಿತ್ತು. ಮೊನ್ನೆ ನನಗೆ ಕರೆ ಮಾಡಿ ನಿಮ್ಮ ಮಗಳಿಗೆ ಆರೋಗ್ಯ ಕೆಟ್ಟಿದೆ ಎಂದು ತಿಳಿಸಿದ್ದರು. ಅದಾದ ಸ್ವಲ್ಪ ಹೊತ್ತಲ್ಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಕರೆ ಬಂತು” ಎಂದು ಹೇಳಿದ್ದಾರೆ.
ಹೆಚ್ಚಿನ ತನಿಖೆ ನಡೆಸಿದಾಗ, ಮಹಿಳೆಯ 4 ವರ್ಷದ ಪುತ್ರಿ ಬಿಡಿಸಿರುವ ಡ್ರಾಯಿಂಗ್ ಪೊಲೀಸರಿಗೆ ಲಭ್ಯವಾಗಿದೆ. ಬಾಲಕಿ ಬರೆದಿರುವ ಚಿತ್ರದಿಂದ ಪೊಲೀಸರಿಗೆ ಅನುಮಾನ ಮೂಡಿದ್ದು ಆಕೆಯನ್ನು ಮೆಲ್ಲಗೆ ಮಾತನಾಡಿಸಿದಾಗ ಮಗುವು, “ಪಪ್ಪಾ, ಅಮ್ಮನಿಗೆ ಹೊಡೆಯಿತು, ನಂತರ ನೇಣಿಗೆ ಹಾಕಿತು. ಅಮ್ಮನ ತಲೆಗೆ ಪಪ್ಪಾ ಕಲ್ಲಿನಿಂದ ಜಜ್ಜಿ, ಚೀಲಕ್ಕೆ ತುಂಬಿ, ಅಮ್ಮನನ್ನು ಹೊತ್ತೊಯ್ಯಿತು” ಎಂದು ಬಾಯಿಬಿಟ್ಟಿದೆ. ಜೊತೆಗೆ, ಅದಕ್ಕೂ ಮೊದಲು ಅಮ್ಮನಿಗೆ ಅಪ್ಪ ಜೋರಾಗಿ ಬೈದಿದ್ದರು. ನಾನು ಅದಕ್ಕೆ ಅಪ್ಪನನ್ನು ಗದರಿಸಿದೆ. ಆಗ ಅಮ್ಮನನ್ನು ಹೊಡೆದು ಸಾಯಿಸುತ್ತೇನೆ. ಹೆಚ್ಚು ಮಾತಾಡಿದರೆ ನಿನ್ನನ್ನೂ ಸಾಯಿಸುವೆ ಎಂದು ಅಪ್ಪ ಹೇಳಿದರು ಎಂಬ ವಿಚಾರವನ್ನೂ ಮಗು ಹೇಳಿಕೊಂಡಿದೆ. ಮಗುವಿನ ಹೇಳಿಕೆಯನ್ನು ಆಧರಿಸಿ ಪೊಲೀಸರು ಈಗ ಮಹಿಳೆಯ ಪತಿಯನ್ನು ಬಂಧಿಸಿದ್ದಾರೆ. ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆದಿದೆ.